ನವದೆಹಲಿ: ಹದಿಹರೆಯದ ಮಕ್ಕಳನ್ನು ಆತ್ಮಹತ್ಯೆಗೆ ದೂಡುವ ಅಪಾಯಕಾರಿ ಆಟ ‘ಬ್ಲೂವೇಲ್ ಚಾಲೆಂಜ್’ ಹಳತಾಯಿತು. ಈಗ ಮತ್ತೊಂದು ಡೇಂಜರಸ್ ಆಟ ಆನ್‌ಲೈನ್‌ನಲ್ಲಿ ಪ್ರತ್ಯಕ್ಷವಾಗಿದೆ. ಅದರ ಹೆಸರು- ಮೋಮೋ ಚಾಲೆಂಜ್. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆ್ಯಪ್ ಮೂಲಕ ಈ ಹೊಸ ಆತ್ಮಹತ್ಯಾ ಆಟ ಹಬ್ಬುತ್ತಿದೆ. 

ಅರ್ಜೆಂಟೀನಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಅದಕ್ಕೆ ಮೋಮೋ ಚಾಲೆಂಜ್ ಕಾರಣ ಎಂದು ಪತ್ರಿಕೆ ಯೊಂದು ವರದಿ ಮಾಡಿದೆ.  ಈ ನಡುವೆ, ಮೋಮೋ ಚಾಲೆಂಜ್ ಕುರಿತು ಸ್ಪೇನ್ ನ ರಾಷ್ಟ್ರೀಯ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಏನಿದು ಆಟ?: ಅತ್ಯಂತ ಭಯಾನಕ ಚಿತ್ರವೊಂದು ವಾಟ್ಸ್‌ಆ್ಯಪ್‌ಗೆ ಬರುತ್ತದೆ. ಅದರ ಜತೆಗೆ ಕೆಲವೊಂದು ಸವಾಲುಗಳನ್ನೂ ನೀಡಲಾಗಿರುತ್ತದೆ. ಹದಿಹರೆಯದ ಮಕ್ಕಳಿಗೆ ಸವಾಲಿಗೆ ಅನುಸಾರ ವಿಚಿತ್ರ ನಡವಳಿಕೆ ತೋರಿ ಸುವಂತೆ ನಿರ್ದೇಶನವಿರುತ್ತದೆ. ಕೊನೆಗೆ ಆತ್ಮಹತ್ಯೆಯಲ್ಲಿ ಈ ಆಟ ಪರ್ಯ ವಸಾನಗೊಳ್ಳುತ್ತದೆ ಎಂದು ಹೇಳಲಾಗಿದೆ. 

ಮೋಮೋ ಚಾಲೆಂಜ್‌ನಡಿ ವಾಟ್ಸ್‌ಆ್ಯಪ್‌ಗೆ ಬರುವ ವಿಚಿತ್ರ ಫೋಟೋವನ್ನು ಜಪಾನ್ ಕಲಾವಿದ ಮಿಡೋರಿ ಹಯಾಶಿ ಎಂಬುವರು ಸೃಷ್ಟಿಸಿದ್ದಾರೆ. ಆ ಚಿತ್ರಕ್ಕೂ, ಅದನ್ನು ಬರೆದವರಿಗೂ ಮತ್ತು ಈ ಆಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ. ವಾಟ್ಸ್‌ಆ್ಯಪ್ ಮೂಲಕ ಮೋಮೊ ಚಾಲೆಂಜ್ ಬರುತ್ತಿದ್ದು, ಅದನ್ನು ಸ್ವೀಕರಿಸಿದವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಬ್ಲೂವೇಲ್ ಚಾಲೆಂಜ್ ರೀತಿಯಲ್ಲೇ ಈ ಆಟವೂ ಇರುತ್ತದೆ ಎನ್ನಲಾಗಿದೆ.

ಈ ನಡುವೆ ಮೋಮೋ ಚಾಲೆಂಜ್ ಬಗ್ಗೆ ಕೆಲ ಗುಮಾನಿಗಳೂ ಇವೆ.  ಮೂಲಕ ಮೋಮೋ ಚಾಲೆಂಜ್ ಒಡ್ಡಿ ಖಾಸಗಿ ಮಾಹಿತಿಗಳನ್ನು ಕದಿಯುವ ಹುನ್ನಾರವೂ ಇದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಇನ್ನು ಕೆಲವರು ಈ ಚಾಲೆಂಜ್ ಕಪಿಮುಷ್ಟಿಗೆ ಸಿಲುಕದಂತೆ ಮಕ್ಕಳನ್ನು  ನೋಡಿ ಕೊಳ್ಳುವಂತೆ ಪೋಷಕರಿಗೆ ಸಲಹೆ ಮಾಡಿದ್ದಾರೆ.