ಶ್ರೀನಗರ[ಜು.27]: ಜಮ್ಮು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗೆ ಮತ್ತಷ್ಟು ಶಕ್ತಿ ತುಂಬಿಸಲು ಕೇಂದ್ರ ಸರ್ಕಾರ 10 ಸಾವಿರ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ರಾಜ್ಯಕ್ಕೆ ಕಳುಹಿಸಿದೆ. ಕಳೆದೆರಡು ದಿನಗಳಿಂದ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮರಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂಬುವುದು ಉಲ್ಲೇಖನೀಯ.

ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದ ಅಜಿತ್ ದೋವಲ್ ಕಾನೂನು ವ್ಯವಸ್ಥೆಗೆ ಸಂಬಂಧಿಸಿದಂತೆ ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರೆನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀತರದ ಡಿಜಿ ದಿಲ್ಬಾಗ್ ಸಿಂಗ್ 'ಉತ್ತರ ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ರವಾನಿಸುವಂತೆ ನಾನು ಈ ಹಿಂದಿನಿಂದಲೇ ಕೇಳುತ್ತಾ ಬಂದಿದ್ದೆ' ಎಂದಿದ್ದಾರೆ. ಅತ್ತ ಗೃಹ ಸಚಿವಾಲಯ ಹೊರಡಿಸಿರುವ ಆದೇಶ ಪ್ರತಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಉತ್ತಮವಾಗಬೇಕು ಎಂಬ ನಿಟ್ಟಿನಲ್ಲಿ ಹೆಚ್ಚುವರಿ ಸೈನಿಕರನ್ನು ನೇಮಿಸುತ್ತಿರುವುದಾಗಿ ತಿಳಿಸಿದೆ.

ಬದಲಾಗದ ಸರ್ಜಿಕಲ್ ದಾಳಿ ಮಾಸ್ಟರ್ ಮೈಂಡ್ ಅಜಿತ್ ದೋವಲ್ ಸ್ಥಾನ

ದಿಲ್ಬಾಗ್ ಸಿಂಗ್ 'ಉತ್ತರ ಕಾಶ್ಮೀರದಲ್ಲಿರುವ ಸೈನಿಕರ ಸಂಖ್ಯೆ ಅಗತ್ಯಕ್ಕಿಂತ ಕಡಿಮೆ ಇದೆ. ಹೀಗಾಗಿ ಇಲ್ಲಿ ಹೆಚ್ಚುವರಿ ಸೈನಿಕ ಅಗತ್ಯ ನಮಗಿತ್ತು. 100 ಕಂಪೆನಿಗಳನ್ನು ವಾಯು ಮಾರ್ಗದ ಮೂಲಕ ಉತ್ತರ ಕಾಶ್ಮೀರಕ್ಕೆ ಕಳುಹಿಸಲಾಗಿದೆ. ನಾವು ಇದಕ್ಕಾಗಿ ಈ ಮೊದಲೇ ಬೇಡಿಕೆ ಇಟ್ಟಿದ್ದೆವು. ಇದನ್ನು ಹೊರತುಪಡಿಸಿ ಕೇಳಿ ಬರುವ ಬೇರೆ ಯಾವುದೇ ಕಾರಣಗಳು ಸತ್ಯಕ್ಕೆ ದೂರವಾದವು' ಎಂದಿದ್ದಾರೆ. ಇನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲಾದ ಸೈನಿಕರನ್ನು ದೇಶದ ನಾನಾ ಪ್ರದೇಶಗಳಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದಷ್ಟೇ ಅಮರನಾಥ ಯಾತ್ರೆಯನ್ನು ಯಶಸ್ವೀಗೊಳಿಸಲು ರಾಜ್ಯದಲ್ಲಿ 40 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿತ್ತು. ಅಲ್ಲದೇ 2019ರ ಫೆಬ್ರವರಿ 24 ರಂದು 100 ಪ್ಯಾರಾ ಮಿಲಿಟರಿ ತುಕಡಿಗಳನ್ನು ಘಾಟಿಯಲ್ಲಿ ಬೇಮಿಸಲಾಗಿತ್ತು. ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರವ ಏಪ್ರಿಲ್ ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿತ್ತು. 

ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕ ಅಜಿತ್ ದೋವಲ್ ರನ್ನು ಮತ್ತೊಮ್ಮೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನಿಯೋಜಿಸಲಾಗಿದೆ.