ನವದೆಹಲಿ[ಮಾ.13]: ಕರ್ನಾಟಕದ ಅರ್ಧದಷ್ಟುಜನಸಂಖ್ಯೆ ಹೊಂದಿರುವ ಸೌದಿ ಅರೇಬಿಯಾ, ವಿಶ್ವದಲ್ಲೇ ಅತ್ಯಂತ ಹೆಚ್ಚು ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಕಳೆದೊಂದು ದಶಕದಿಂದ ನಂ.1 ಸ್ಥಾನದಲ್ಲಿದ್ದ ಭಾರತವನ್ನು 2ನೇ ಸ್ಥಾನಕ್ಕೆ ತಳ್ಳಿದೆ.

ಸುಮಾರು 120 ಕೋಟಿ ಜನಸಂಖ್ಯೆ ಹೊಂದಿರುವ ಭಾರತ 2014-18ರ ಅವಧಿಯಲ್ಲಿ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೆ.9.5ರಷ್ಟುಪಾಲು ಹೊಂದಿದ್ದರೆ, ಇದೇ ಅವಧಿಯಲ್ಲಿ ಕರ್ನಾಟಕದ ಜನಸಂಖ್ಯೆ (6.77)ಗಿಂದ ಅರ್ಧದಷ್ಟುಜನಸಂಖ್ಯೆ ಹೊಂದಿರುವ ಸೌದಿ ಅರೇಬಿಯಾ (3.30 ಕೋಟಿ) ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.12ರಷ್ಟುಪಾಲು ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ. ಶೇ.4.2ರಷ್ಟುಪಾಲಿನ ಮೂಲಕ ನೆರೆಯ ಚೀನಾ 6ನೇ ಸ್ಥಾನದಲ್ಲಿದೆ ಎಂದು ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ(ಸಿಪ್ರಿ) ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನು 2009-13ಕ್ಕೆ ಹೋಲಿಸಿದರೆ 2014-18ರ ಅವಧಿಯಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಖರೀದಿಯಲ್ಲಿ ಶೆ.39ರಷ್ಟುಇಳಿಕೆ ಕಂಡುಬಂದಿದೆ. ಅಮೆರಿಕವು ಪಾಕಿಸ್ತಾನಕ್ಕೆ ಮಿಲಿಟರಿ ನೆರವು ಕಡಿಮೆ ಮಾಡಿರುವುದು ಮತ್ತು ಕೆಲ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಹಿಂಜರಿಯುತ್ತಿರುವುದು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.