ಶ್ರೀನಗರ[ಆ.10]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ(ಸೆಕ್ಷನ್‌-144) ಅನ್ನು ಕಾಶ್ಮೀರದಲ್ಲಿ ತೆರವು ಮಾಡಲಾಗಿದೆ. ಇದರ ಪರಿಣಾಮ 5 ದಿನಗಳಿಂದ ಮನೆಯಲ್ಲೇ ಕುಳಿತಿದ್ದ ಮುಸ್ಲಿಂ ಸಮುದಾಯದವರು ಶುಕ್ರವಾರ ಸ್ಥಳೀಯ ಮಸೀದಿಗಳಿಗೆ ತೆರಳಿ ನಿರ್ಭೀತಿಯಿಂದ ನಮಾಜು ಮಾಡಿದ್ದಾರೆ. ಮತ್ತೊಂದೆಡೆ ಶನಿವಾರದಿಂದಲೇ ಶಾಲಾ-ಕಾಲೇಜುಗಳು ಆರಂಭವಾಗಲಿವೆ.

370ನೇ ವಿಧಿ, 35(ಎ) ರದ್ದು ಹಾಗೂ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ, ಭದ್ರತಾ ಸಿಬ್ಬಂದಿ ಹಾಗೂ ಜನ ಸಾಮಾನ್ಯರ ಮೇಲೆ ಕಲ್ಲು ತೂರಾಟಗಾರರ ಭೀತಿಯಿಂದಾಗಿ ಮುಂದಾಲೋಚನಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರಿಂದಾಗಿ ಶುಕ್ರವಾರ ನಿಷೇಧಾಜ್ಞೆ ತೆರವು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಎಡಿಜಿಪಿ ಮುನೀರ್‌ ಖಾನ್‌ ಅವರು, ‘ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ. ಅಲ್ಲದೆ, ಕಾನೂನು ಸುವ್ಯವಸ್ಥೆಗಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ’ ಎಂದಿದ್ದಾರೆ. ಉತ್ತರ ಕಾಶ್ಮೀರದ ಸಪೋರ್‌ ಪಟ್ಟಣದಲ್ಲಿ ಕೆಲವು ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು, ಹೊರತುಪಡಿಸಿ ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಯಾವುದೇ ದುರ್ಘಟನೆಗಳು ನಡೆದಿಲ್ಲ.

ಶ್ರೀನಗರದಲ್ಲಿ ದೋವಲ್‌ ರೌಂಡ್ಸ್‌

ಜಮ್ಮು-ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮಂಗಳವಾರದಿಂದ ರಾಜ್ಯದಲ್ಲೇ ಬೀಡುಬಿಟ್ಟಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಇಲ್ಲಿನ ಸ್ಥಳೀಯರಲ್ಲಿ ಭರವಸೆ ಮೂಡಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಶುಕ್ರವಾರವೂ ಅವರು ಇಲ್ಲಿನ ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿದ ಬಳಿಕ ಸಿಆರ್‌ಪಿಎಫ್‌ ಹಾಗೂ ಪೊಲೀಸ್‌ ಅಧಿಕಾರಿಗಳ ಜೊತೆ ಮಾತನಾಡಿದ ದೋವಲ್‌ ಅವರು, ಯಾವುದೇ ಕಾರಣಕ್ಕೂ ಶ್ರೀಸಾಮಾನ್ಯರಿಗೆ ಯಾವುದೇ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದರು.