ಗೋಕಾಕ :  ‘ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ನಂತರ ಹಾಲಿ ಸಚಿವರೆಲ್ಲ ಮಾಜಿಗಳಾಗಲಿದ್ದಾರೆ. ನಮಗೆ ದೊಡ್ಡ ಪ್ರಮಾಣದ ಅಧಿಕಾರ ಸಿಗಲಿದೆ’ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಪುತ್ರ ಅಮರನಾಥ ಜಾರಕಿಹೊಳಿ ಕೆಎಂಎಫ್‌ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗುರುವಾರ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಭೆಯಲ್ಲಿ ಮಾತನಾಡಿ, ಮೇ 23ರ ಬಳಿಕ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣವಾಗಲಿದೆ. ರಾಜ್ಯ ಸರ್ಕಾರದಲ್ಲಿ ಸಾಕಷ್ಟುಬದಲಾವಣೆಗಳಾಗಲಿವೆ ಎಂದು ಭವಿಷ್ಯ ನುಡಿದರು.

ಸಹೋದರನ ವಿರುದ್ಧ ಕಿಡಿ: ಈಗ ಕಾರಿಗೆ ಕೆಂಪು ದೀಪ ಹಾಕಿಕೊಂಡು ಓಡಾಡುವರಿಗೆ ಹೆದರಬೇಡಿ, ಮುಂದಿನ ದಿನಗಳಲ್ಲಿ ನಮಗೆ ದೊಡ್ಡ ಅಧಿಕಾರ ಬರಲಿದೆ. ಅಧಿಕಾರ ಇರಲಿ, ಬಿಡಲಿ ನಮ್ಮನ್ನು ನಂಬಿ. ಸಮಯ ಸಾಧಕರನ್ನು, ವಿಶ್ವಾಸ ದ್ರೋಹ, ಬೆನ್ನಿಗೆ ಚೂರಿ ಹಾಕುವ ಮಂದಿಯನ್ನು ನಂಬಬೇಡಿ ಎಂದು ಪರೋಕ್ಷವಾಗಿ ಸಹೋದರ ಸತೀಶ್‌ ಜಾರಕಿಹೊಳಿ ವಿರುದ್ಧ ರಮೇಶ್‌ ವಾಗ್ದಾಳಿ ನಡೆಸಿದರು.

ಇದೇ ವೇಳೆ, ಬೆಂಗಳೂರು ಮಟ್ಟದಲ್ಲಿ ಮಗನನ್ನು ಬೆಳೆಸುವ ಆಸೆ ಇದೆ ಎಂದ ಅವರು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಈ ಮೂಲಕ ಮುಂದಿನ ದಿನಗಳಲ್ಲಿ ತಮ್ಮ ಪುತ್ರನನ್ನು ಸಕ್ರಿಯ ರಾಜಕೀಯಕ್ಕೆ ಕರೆತರುವ ಸುಳಿವು ನೀಡಿದರು.