Asianet Suvarna News Asianet Suvarna News

60 ಕಾರು ರಕ್ಷಿಸಿದ ಯುವಕರ ಗುಂಪು : ಯಾರವರು..?

ಏರೋ ಇಂಡಿಯಾ ಶೊ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಈ ವೇಳೆ  ಯುವಪಡೆಯೊಂದು ಪ್ರಾಣದ ಹಂಗು ತೊರೆದು ಬೆಂಕಿ ನಂದಿಸುವುದಕ್ಕೆ ಕೈ ಜೋಡಿಸಿತು. ಇದರ ಫಲವಾಗಿ ಸುಮಾರು 50 ರಿಂದ 60 ಕಾರುಗಳು ಬೆಂಕಿಯಿಂದ ಪಾರಾದವು.

Aero India Show 2019 youth Group Save 60 Cars
Author
Bengaluru, First Published Feb 24, 2019, 9:50 AM IST

ಬೆಂಗಳೂರು :  ಏರೋ ಶೋ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಸ್ಥಳದಲ್ಲಿದ್ದವರು ಓಡಿದರು, ಕೆಲವರು ತಮ್ಮ ಕಾರುಗಳ ರಕ್ಷಣೆಗೆ ಮುಂದಾದರು. ಆದರೆ, ಅಲ್ಲೊಂದು ಯುವಪಡೆ ಮಾತ್ರ ಪ್ರಾಣದ ಹಂಗು ತೊರೆದು ಬೆಂಕಿ ನಂದಿಸುವುದಕ್ಕೆ ಕೈ ಜೋಡಿಸಿತು. ಇದರ ಫಲವಾಗಿ ಸುಮಾರು 50 ರಿಂದ 60 ಕಾರುಗಳು ಬೆಂಕಿಯಿಂದ ಪಾರಾದವು.

ಶನಿವಾರ ಏರೋ ಶೋ ವೀಕ್ಷಕರಿಗೆ ಗೇಟ್ ನಂಬರ್ 5 ರಲ್ಲಿ ಕಾರು ಮತ್ತು ಬೈಕ್ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಸುಮಾರು 85 ಎಕರೆ ಪ್ರದೇಶದಲ್ಲಿ ಸಾವಿರಾರು ಕಾರು ಮತ್ತು ಬೈಕ್ ನಿಲ್ಲಿಸಲಾಗಿತ್ತು. ಈ ಪಾರ್ಕಿಂಗ್ ಸ್ಥಳದ ಆಗ್ನೇಯ ಭಾಗದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಸುಮಾರು 300 ಕಾರುಗಳು ಭಸ್ಮವಾಗಿವೆ. ಈ ಯುವಪಡೆ ಕೈ ಜೋಡಿಸದಿದ್ದರೆ ಬೆಂಕಿಗೆ ಆಹುತಿ ಆಗಿರುವ ಕಾರುಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ.

ಯುವಕರು ಸಾವಿರಾರು ರುಪಾಯಿ ಟಿಕೆಟ್ ಕೊಂಡು ಶನಿವಾರ ‘ಏರೋ ಶೋ’ ವೀಕ್ಷಣೆಗೆ ಬಂದವರು. ಬೈಕ್, ಕಾರು ಹೀಗೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ಗೇಟ್ ನಂಬರ್ ಜಿ-5 ಗೆ ಆಗಮಿಸಿದ್ದಾರೆ. ಅದೇ ವೇಳೆಗೆ ಕಾರುಗಳಿಗೆ ಬೆಂಕಿ ಬಿದ್ದಿದೆ. ತಕ್ಷಣ ತಮ್ಮ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ಬೆಂಕಿಯಿಂದ ಹಾನಿಗೆ ಒಳಗಾಗುತ್ತಿದ್ದ ವಾಹನಗಳ ರಕ್ಷಣೆಗೆ ಧಾವಿಸಿದ್ದಾರೆ.

ಯಾರು ಈ ಯುವಕರು?

ಬಳ್ಳಾರಿಯಿಂದ ಏರ್ ಶೋ ನೋಡಲು ಆಗಮಿಸಿದ್ದ ಕೋಟೇಶ್ವರ್ ರಾವ್, ನಗರದ ಸುರಾನಾ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾದ ಏಕಲವ್ಯ ನಾಯ್ಡು ಹಾಗೂ ಗೌತಮ, ಪಾರ್ಕಿಂಗ್ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಮಣಿ ಮತ್ತು ಶೇಷಾದ್ರಿ ಸೇರಿದಂತೆ ಇನ್ನು ನಾಲ್ಕೈದು ಯುವಕರು ಕಾರುಗಳ ಗಾಜುಗಳನ್ನು ಒಡೆದು ಕಾರಿನ ಹ್ಯಾಂಡ್ ಬ್ರೇಕ್ ತೆಗೆದು ಕಾರನ್ನು ಬೆಂಕಿಯಿಂದ ದೂರ ತಳ್ಳುವ ಕೆಲಸ ಮಾಡಿದ್ದಾರೆ. ಇದರಿಂದ ಸುಮಾರು 50 ರಿಂದ 60 ಕಾರುಗಳು ಸಣ್ಣ ಪುಟ್ಟ ಜಖಂ ಮಾತ್ರಆಗಿದ್ದು, ಕಾರುಗಳು ಬೆಂಕಿಯಿಂದ ಉಳಿದಿವೆ. 

Follow Us:
Download App:
  • android
  • ios