ಬೆಂಗಳೂರು :  ವಾರಾಂತ್ಯದ ದಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಸಾವಿರಾರು ಜನರು ಹರಿದು ಬಂದಿದ್ದು, ಈ ವೇಳೆ ತೀವ್ರ ಬಿಸಿಲು ಹಾಗೂ ದಣಿವಿನಿಂದಾಗಿ 71ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ತೀವ್ರ ಬಿಸಿಲಿನಿಂದಾಗಿ ದೇಹದಲ್ಲಿ ನಿರ್ಜಲೀಕರಣ, ತಲೆ ಸುತ್ತುವುದು, ತಲೆನೋವು ಹಾಗೂ ರಕ್ತದೊತ್ತಡ ಸಮಸ್ಯೆಗಳಿಂದಾಗಿ ಏರೋ ಇಂಡಿಯಾದ ಹಾಲ್‌-ಸಿ ಹಿಂಭಾಗದಲ್ಲಿರುವ ಆಸ್ಪತ್ರೆಗೆ ಅನೇಕರು ಭೇಟಿ ನೀಡಿದ್ದರು.

ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ವೈದ್ಯರು, ಮಧ್ಯಾಹ್ನ 3 ಗಂಟೆವರೆಗೆ 71ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ ಬಹುತೇಕರು ತೀವ್ರ ಬಿಸಿಲಿನಿಂದಾಗಿ ತಲೆ ಸುತ್ತುವುದು, ಸುಸ್ತು ಹಾಗೂ ತಲೆ ನೋವಿನಂತಹ ಸಮಸ್ಯೆಗಳಿಂದ ಆಗಮಿಸಿದ್ದರು. ಇವರಲ್ಲಿ ಕೆಲವರು ಚಿಕಿತ್ಸೆ ನೀಡಿ ಕಳುಹಿಸಿದ್ದು, ತೀವ್ರವಾಗಿ ಬಳಲಿರುವ 10ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಉಳಿದಂತೆ ಒಬ್ಬರು ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ಆಸ್ಪತ್ರೆಗೆ ಆಗಮಿಸಿದ್ದು ಅವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಮೂಲಕ ಬೇರೆ ಆಸ್ಪತ್ರೆಗೆ ಕಳಿಸಿದದೇವೆ ಎಂದು ಹೇಳಿದರು. ಆದರೆ, ವ್ಯಕ್ತಿ ಹಾಗೂ ಕಾಯಿಲೆಯ ಮಾಹಿತಿ ನೀಡಲು ನಿರಾಕರಿಸಿದರು.