ಬೆಂಗಳೂರು:  ಸೂರ್ಯ ಕಿರಣ್‌ ವಿಮಾನ ಡಿಕ್ಕಿಯಂತಹ ಮಹಾ ದುರಂತದ ವೇಳೆ ಕನ್ನ​ಡಿ​ಗರ ಸಮಯ ಪ್ರಜ್ಞೆ ಹಾಗೂ ಸಂಕ​ಷ್ಟ​ದ​ಲ್ಲಿ​ರು​ವ​ವರ ನೆರ​ವಿಗೆ ಧಾವಿ​ಸುವ ಮಾನ​ವೀಯ ಗುಣ ಬೆಳ​ಕಿಗೆ ಬಂದಿ​ದೆ.

ಹೌದು, ಈ ದುರಂತಕ್ಕೆ ಸಿಲುಕಿ ಪ್ಯಾರಾ​ಚೂ​ಟ್‌​ನಿಂದ ವಿಮಾ​ನ​ದಿಂದ ಹೊರ ಚಿಮ್ಮಿ ಯಲ​ಹಂಕದ ಇಸ್ರೋ ಲೇಔ​ಟ್‌ನ ಹೊಲ​ವೊಂದ​ರಲ್ಲಿ ಗಾಯ​ಗೊಂಡು ಬಿದ್ದಿದ್ದ ವಿಂಗ್‌ ಕಮಾಂಡರ್‌ ವಿ.ಟಿ.ಶೆಲ್ಕೆ ಅವರನ್ನು ಕನ್ನ​ಡದ ಐವರು ಹುಡು​ಗರು ಸಂತೈ​ಸಿದ ರೀತಿ ಕನ್ನ​ಡಿ​ಗರ ನಿಜ ಮನೋ​ಗುಣ​ವನ್ನು ಜಗ​ತ್ತಿನ ಮುಂದೆ ತೆರೆ​ದಿ​ಟ್ಟಿದೆ.

ನಿಟ್ಟೆಮೀನಾಕ್ಷಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ಚೇತನ್‌ ಕುಮಾರ್‌, ಪ್ರಜ್ವಲ್‌, ಆಕಾಶ್‌ ಕೊಡ್ಲೆ ಮತ್ತು ಓಂಕಾರ್‌ ರೆಡ್ಡಿ ಅವರು ಪೈಲಟ್‌ ಶೆಲ್ಕೆ ಅವ​ರನ್ನು ಸಂತೈ​ಸಿದ ರೀತಿ ಹಾಗೂ ಅವರಿಗೆ ನೆರವಾಗಿದ್ದಾರೆ. ಈ ಸಂದ​ರ್ಭ​ದಲ್ಲಿ ಹುಡು​ಗರು ನಡೆ​ದು​ಕೊಂಡ ರೀತಿ​ಯನ್ನು ಮೊಬೈ​ಲ್‌​ನಲ್ಲಿ ಚಿತ್ರೀ​ಕ​ರಿ​ಸ​ಲಾ​ಗಿದ್ದು, ಆ ದೃಶ್ಯ​ಗಳು ವೈರಲ್‌ ಆಗಿವೆ.

ಇಸ್ರೋ ಲೇಔ​ಟ್‌ನ ಅಪಾರ್ಟ್‌ಮೆಂಟ್‌ನ ಟೆರೇಸ್‌ ಮೇಲೆ ನಿಂತು ವಿಮಾನಗಳ ತಾಲೀಮು ವೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು ವಿಮಾನಗಳು ಅಪಘಾತಕ್ಕೀಡಾಗಿ ಧರೆಗುರುಳುತ್ತಿದ್ದ ಸ್ಥಳಕ್ಕೆ ಧಾವಿ​ಸಿ​ದ್ದಾರೆ. ಅಷ್ಟೊತ್ತಿಗೆ ಯಲಹಂಕದ ಇಸ್ರೋ ಲೇಔಟ್‌ ವ್ಯಾಪ್ತಿಯಲ್ಲಿ ಬಿದ್ದು ವಿಮಾನಗಳು ಹೊತ್ತಿ ಧಗಧಗಿಸಿ ಉರಿಯುತ್ತಿದ್ದುದು ಕಂಡ ಯುವಕರು ಎದೆಗುಂದದೆ ಸಮೀಪವೇ ನಿತ್ರಾಣಗೊಂಡು ಬಿದ್ದಿದ್ದ ಪೈಲಟ್‌ ಶೆಲ್ಕೆ ಬಳಿ ತೆರಳಿ ಅವ​ರನ್ನು ಉಪ​ಚ​ರಿ​ಸಲು ಆರಂಭಿ​ಸು​ತ್ತಾರೆ. ‘ಏನೂ ಆಗಿಲ್ಲ, ಗಾಬರಿ ಪಡ​ಬೇಡಿ’ ಎಂದು ಸಂತೈ​ಸುವ ಈ ಹುಡು​ಗರು, ಪೈಲ​ಟ್‌ನ ಕೈಯನ್ನು ಹಿಡಿದು ಸಮಾ​ಧಾನ ಹೇಳಿದ್ದಾರೆ.

ಜತೆಗೆ, ಶೆಲ್ಕೈ ಅವ​ರಿಂದಲೇ ಮಾಹಿತಿ ಪಡೆದು ಅವ​ರಿದ್ದ ವಿಮಾ​ನದ ಆಸನ ಮತ್ತು ಪ್ಯಾರಾಚೂಟ್‌ನಿಂದ ಬೇರ್ಪಡಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಸಹ ಪೈಲಟ್‌ ಎಲ್ಲಿದ್ದಾರೆ ನೋಡುವಂತೆ ಶೆಲ್ಕೆ ಹೇಳಿ​ದಾಗ ಕೂಡಲೇ ಅವ​ರನ್ನು ಹುಡು​ಕಾ​ಡುವ ಹುಡು​ಗರು, ಸ್ವಲ್ಪ ದೂರಗಲ್ಲಿ ಬಿದ್ದಿದ್ದ ಮತ್ತೊಬ್ಬ ಪೈಲ​ಟ್‌ಅನ್ನು ಉಪ​ಚ​ರಿಸಿದರು. ಇದೇ ವೇಳೆ ಅಗ್ನಿ​ಶಾ​ಮಕ ದಳ ಹಾಗ ಪೊಲೀ​ಸ​ರಿಗೂ ದೂರ​ವಾಣಿ ಮೂಲಕ ಮಾಹಿತಿ ನೀಡಿದರು.

ಪೈಲ​ಟ್‌​ಗ​ಳಿಗೆ ನಾವು ಉಪ​ಚ​ರಿಸಿ, ಸಂತೈ​ಸುವ ವೇಳೆಗೆ ರಕ್ಷಣಾ ಇಲಾಖೆಯ ತುರ್ತು ದಳದವರು ಬಂದು ಅವರನ್ನು ಕರೆದೊಯ್ದರು ಎಂದು ವಿದ್ಯಾರ್ಥಿ ಚೇತನ್‌ ಕುಮಾರ್‌ ‘ಕನ್ನಡಪ್ರಭ’ಗೆ ತಿಳಿಸಿದರು.

ಫೆ.20ರಿಂದ ಆರಂಭವಾಗುವ ಏರ್ ಶೋ 24ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.