ವಿವಾಹ ವಿಚ್ಚೇದನ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಸಿದ್ದಕ್ಕೆ ಕುಪಿತಗೊಂಡ ಕಕ್ಷಿದಾರ ವಕೀಲರನ್ನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿ ಶನಿವಾರ ನಡೆದಿದೆ.
ಕುಣಿಗಲ್: ವಿವಾಹ ವಿಚ್ಚೇದನ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಸಿದ್ದಕ್ಕೆ ಕುಪಿತಗೊಂಡ ಕಕ್ಷಿದಾರ ವಕೀಲರನ್ನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ನಲ್ಲಿ ಶನಿವಾರ ನಡೆದಿದೆ.
ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ವಕೀಲ ಹರ್ಷ ಅವರು ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದು, ಅವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ತಾಲೂಕಿನ ಚೊಟ್ನಹಳ್ಳಿಯ ಬೈರೇಗೌಡ ಹಲ್ಲೆ ನಡೆಸಿದ ಆರೋಪಿ.
ಬೈರೇಗೌಡ, ಜಿನ್ನಾಗರೆ ಗ್ರಾಮದ ಮಹಿಳೆಯೊಬ್ಬರನ್ನು ವಿವಾಹವಾಗಿದ್ದ. ‘ಈತನಿಗೆ ಅಕ್ರಮ ಸಂಬಂಧ ಇದೆ’ ಎಂದು ಆರೋಪಿಸಿ ಮಹಿಳೆಯು ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ವಕೀಲರಾದ ಹರ್ಷ ಮತ್ತು ಚಂದ್ರೇಗೌಡ ಅವರು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಮುಂದಾಗಿದ್ದರು.
ಶನಿವಾರ ವಕೀಲರನ್ನು ಭೇಟಿಯಾಗಲು ಬಂದ ಬೈರೇಗೌಡ, ಹರ್ಷ ಅವರ ಕೈ, ಎದೆ, ಬೆನ್ನಿಗೆ ಚಾಕುರಿದು ಗಾಯಗೊಳಿಸಿದ್ದಾನೆ. ಮತ್ತೊಬ್ಬ ವಕೀಲ ಚಂದ್ರೇಗೌಡ ಹಾಗೂ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
