ನವದೆಹಲಿ (ಸೆ.15): ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯಾವುದೇ ಜನ ಕಲ್ಯಾಣ ಯೋಜನೆಗಳ ಲಾಭ ಪಡೆಯಲು, ಯೋಜನೆಗಳ ಫಲಾನುಭವಿಗಳು ತಮ್ಮ ಅನುದಾನವನ್ನು ನೇರವಾಗಿ ತಮ್ಮ ಖಾತೆಗಳಿಗೆ ಪಡೆಯಲು ಇನ್ನು ಮುಂದೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ‘ದ ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಅಡುಗೆ ಅನಿಲ ಸಿಲಿಂಡರ್‌ ಸಬ್ಸಿಡಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ಸ್ಕಾಲರ್‌ಶಿಪ್‌ಗಳ ಹಣವನ್ನು ಪಡೆಯಲು ಫಲಾನುಭವಿಗಳು ತಮ್ಮ ಆಧಾರ್‌ ಅನ್ನು ಈ ಕೂಡಲೇ ಯೋಜನೆಯೊಂದಿಗೆ ಲಿಂಕ್‌ ಮಾಡಬೇಕಾಗಿದೆ.

‘‘ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಅನ್ನು ಕಡ್ಡಾಯವಾಗಿ ಹೊಂದಬೇಕೆಂಬುದನ್ನು ಸರ್ಕಾರವೇ ಸಾರ್ವಜನಿಕರಿಗೆ ತಿಳಿಸಬೇಕು. ಆಧಾರ್‌ ನೋಂದಣಿ ಘಟಕಗಳು ಅನುಕೂಲಕರ ಸ್ಥಳಗಳಲ್ಲಿ ಇಲ್ಲ ಎಂದು ಸಾರ್ವಜನಿಕರು ನೆಪ ಹೇಳದಂತೆ ಸಚಿವಾಲಯಗಳೇ ಜವಾಬ್ದಾರಿ ತೆಗೆದುಕೊಳ್ಳಬೇಕು,’’ ಎಂದು ಭಾರತೀಯ ವಿಶಿಷ್ಟಗುರುತಿನ ಪ್ರಾಧಿಕಾರದ ಸಿಇಒ ಅಜಯ ಭೂಷಣ್‌ ತಿಳಿಸಿದ್ದಾರೆ.

ಮಾಹಿತಿ ದುರ್ಬಳಕೆಯಾದ್ರೆ ಕ್ರಮ: ಆಧಾರ್‌ನಲ್ಲಿರುವ ಜನರ ಖಾಸಗಿ ಮಾಹಿತಿ ದುರುಪಯೋಗವಾದರೆ ಸಂಬಂಧಿಸಿದವರಿಗೆ ವಿರುದ್ಧ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಧಾರ್‌ ಸಂಖ್ಯೆಯನ್ನು ಯಾವುದೇ ಕಂಪನಿಗಳು ಇತರರೊಂದಿಗೆ ವಿನಿಮಯ ಮಾಡಿಕೊಂಡರೆ ಅದು ಅಪರಾಧವಾಗುತ್ತದೆ ಎಂದು ಅಜಯ್‌ ಭೂಷಣ್‌ ಹೇಳಿದ್ದಾರೆ. ಪ್ರತಿದಿನ 6 ಲಕ್ಷ ಮಂದಿ ಆಧಾರ್‌ ನೋಂದಣಿ ಮಾಡಿಸಿಕೊಳ್ಳುತ್ತಿದ್ದು, ದೇಶದಲ್ಲಿ ಒಟ್ಟು 105 ಕೋಟಿ ಮಂದಿ ಆಧಾರ್‌ ವ್ಯಾಪ್ತಿಯಲ್ಲಿ ಬಂದಿದ್ದಾರೆ ಎಂದಿದ್ದಾರೆ.