ಬೆಂಗಳೂರು :  ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಅವಕಾಶ ಬೇಕೆಂದರೆ ವಿಶೇಷ ಪೂಜೆ ಮಾಡಿಸಿ, ಮಗುವನ್ನು ಬಲಿ ಕೊಡಬೇಕು ಎಂದು ಚಿತ್ರ ನಿರ್ಮಾಪಕ ಎಂದು ಹೇಳಿಕೊಂಡ ವ್ಯಕ್ತಿಗೆ ಸಹ ನಟಿಯೊಬ್ಬರು .8 ಲಕ್ಷ ಕೊಟ್ಟು ವಂಚನೆಗೆ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೊಸಕೆರೆಹಳ್ಳಿ ನಿವಾಸಿ, ಸಹ ನಟಿ ಬಿ.ಎಲ್‌.ಚೇತನಾ ವಂಚನೆಗೆ ಒಳಗಾಗಿದ್ದು, ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ನಾಗೇಶ್‌ ಮತ್ತು ಗೌರಿ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಟ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರ ‘ಮಂಜಿನ ಹನಿ’ ಚಿತ್ರಕ್ಕೆ ನಾನೇ ನಿರ್ಮಾಪಕ, ಚಿತ್ರದಲ್ಲಿ ನಾಯಕನ ತಂಗಿ ಪಾತ್ರ ಕೊಡಿಸುವುದಾಗಿ ನಾಗೇಶ್‌ ನಂಬಿಸಿದ್ದ.

ಚಿತ್ರದಲ್ಲಿ ಅವಕಾಶ ಬೇಕಾದರೆ ಗೌರಿ ಎಂಬುವರ ನೆರವು ಪಡೆಯುವಂತೆ ಹೇಳಿದ್ದ. ಗೌರಿ ಕೇವಲ ವಾಟ್ಸಪ್‌ ಮೂಲಕವೇ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ‘ನಿನ್ನ ಹೆಸರಿಗೆ ಪೂಜೆ ಮಾಡಿಸಬೇಕು, ಮಗುವನ್ನು ಬಲಿಕೊಡಬೇಕು. ಪೂಜೆ ಮಾಡಿಸಲು ನಾಗೇಶ್‌ಗೆ ಹಣ ಕೊಡು’ ಎಂದು ಹೇಳಿದ್ದರು. ನಟಿ ತನ್ನ ಬಳಿ ಇದ್ದ ಚಿನ್ನಾಭರಣ ಗಿರವಿ ಇಟ್ಟು ನಾಗೇಶ್‌ಗೆ .8 ಲಕ್ಷ ನೀಡಿದ್ದಾರೆ. ಅಲ್ಲದೆ, ವೀಣಾ ಎಂಬುವರ ಖಾತೆಗೂ .50 ಸಾವಿರ ಹಣ ಜಮೆ ಮಾಡಿಸಿಕೊಂಡಿದ್ದಾನೆ. ಈಗ ವಂಚನೆ ತಿಳಿದು ದೂರು ದಾಖಲಿಸಿದ್ದಾರೆ.

‘ಮಂಜಿನ ಹನಿ’ ಚಿತ್ರದ ಚಿತ್ರೀಕಣ ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು, ಸುಖಸುಮ್ಮನೆ ಚಿತ್ರದ ಹೆಸರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ಚಿತ್ರರಂಗ ಸ್ಪಷ್ಟಪಡಿಸಿದೆ.