ಬೆಂಗಳೂರು: ಸಿನಿಮಾ ನಟಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕವಾಗಿ ಹಿಂಸೆ ನೀಡುವುದು ಹೆಚ್ಚಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ನಿರೂಪಕಿ ಶೀತಲ್ ಶೆಟ್ಟಿ ಈ ರೀತಿಯ ಘಟನೆಯ ವಿರುದ್ಧ  ಸಿಡಿದೆದ್ದಿದರು.

ಈಗ ನಟಿ ನಿತ್ಯಾ ರಾಮ್ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದಾರೆ. ರಚಿತಾ ರಾಮ್ ಸಹೋದರಿ ಕಿರುತೆರೆ ನಟಿ ನಿತ್ಯಾ ರಾಮ್ ಅವರಿಗೆ ಫೇಸ್ ಬುಕ್ ನಲ್ಲಿ ಒಬ್ಬ ಅಶ್ಲೀಲ ಫೋಟೋ ಕಳುಹಿಸಿ ಕಾಟ ಕೊಡುತ್ತಿದ್ದಾನಂತೆ. ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಆ ಯುವಕನ ವಿರುದ್ದ ಈಗ ನಿತ್ಯಾ ರಾಮ್ ಈಗ ತಿರುಗಿ ಬಿದ್ದಿದ್ದಾರೆ.

ನಟಿ ನಿತ್ಯಾ ರಾಮ್ ಗೆ ಫೇಸ್ ಬುಕ್ ನಲ್ಲಿ ಗೌತಮ್ ಎಂಬ ಒಬ್ಬ ಯುವಕ ಅಶ್ಲೀಲ ಫೋಟೋಗಳನ್ನು ಕಳಿಸಿ ಕಾಟ ನೀಡುತ್ತಿದ್ದನಂತೆ. ಚೆನ್ನೈ ಮೂಲದ ಗೌತಮ್ ಎಂಬುವವನು 'ನಾನು ನಿಮ್ಮ ಫ್ಯಾನ್' ಅಂತ ಹೇಳಿ ಅಸಭ್ಯ ಫೋಟೋಗಳನ್ನು ಕಳುಹಿಸುತ್ತಿದ್ದನಂತೆ. ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆತನಿಗೆ ನಿತ್ಯಾ ರಾಮ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಒಬ್ಬ ಹುಡುಗಿಯ ಹತ್ತಿರ ಗೌರವವಾಗಿ ನಡೆದುಕೋ ಎಂದು ಹೇಳಿದ್ದಾರೆ.

ಫೇಸ್ ಬುಕ್ ನಲ್ಲಿ ನನಗೆ ಎಷ್ಟೋ ಜನ ಅಭಿಮಾನಿಗಳು ಸಂದೇಶ ಕಳಿಸಿ ಪ್ರೀತಿ ತೋರಿಸುತ್ತಾರೆ. ಅದನ್ನು ನೋಡಿ ನನಗೆ ಖುಷಿಯಾಗುತ್ತದೆ. ಆದರೆ ಈ ರೀತಿಯ ವರ್ತನೆಗಳಿಗೆ ನಾನು ಪ್ರೋತ್ಸಾಹ ನೀಡುವುದಿಲ್ಲ  ಎಂದು ನಿತ್ಯಾ ರಾಮ್ ಹೇಳಿದ್ದಾರೆ.