ಕುದುರೆ ಜೊತೆ ಅದೃಷ್ಟ ಕೂಡ ಬದಲಾಯಿತು,ಲೇಡಿಸ್ ಗೆಟಪ್ ಮತ್ತು ಮೂತ್ರಬಾಧೆ : ಶರಣ್ ಹೇಳಿದ 2 ವಿನೋದ ಪ್ರಸಂಗಗಳು

First Published 1, Apr 2018, 1:03 PM IST
Actor Sharan Two Comedy incidents
Highlights

ನಂಗೆ ಸಿಕ್ಕಾಪಟ್ಟೆ ಕಸಿವಿಸಿ, ಹ್ಯಾಗೋ ಮ್ಯಾನೇಜ್ ಮಾಡಿದೆ. ಈ ಫೋಟೋ ಹಾವಳಿಯಿಂದ ಅವಸರದಲ್ಲಿ ಶೂಟಿಂಗ್ ಮುಗಿಸಿಕೊಳ್ಳೋದು ಅನಿವಾರ್ಯ ಆಯ್ತು. ಶೂಟಿಂಗ್ ಶುರುವಾಯ್ತು. ಡೈರೆಕ್ಟರ್ ರೆಡಿ, ಟೇಕ್ ಅಂತಿದ್ರು. ಆದ್ರೆ ನನಗೆ ವಿಪರೀತ ಮೂತ್ರಬಾಧೆ ಶುರುವಾಯ್ತು. ಡೈರೆಕ್ಟರ್ ಕರೆಯುತ್ತಲೇ ಇದ್ರು.

1) ‘ಜಯಲಲಿತಾ’ ಚಿತ್ರದ ಚಿತ್ರೀಕರಣ. ಬೆಂಗಳೂರಿನ ಮಾಲ್‌ವೊಂದರಲ್ಲಿ ಲೊಕೇಷನ್ ಫಿಕ್ಸ್ ಆಗಿತ್ತು. ‘ಲೇಟಾದ್ರೆ ಜನ ಬರ್ತಾರೆ. ಬೆಳಗ್ಗೆ ಬೇಗ ಶೂಟಿಂಗ್ ಮುಗಿಸಿಕೊಳ್ಳೋಣ ಬಂದ್ಬಿಡಿ ಸರ್’ ಅಂತ ಡೈರೆಕ್ಟರ್ ಹೇಳಿದ್ರು. ಆಯ್ತು ಅಂತ ನಾನ್ ಎದ್ನೋ ಬಿದ್ನೋ ಅಂತ ಅವಸರದಲ್ಲಿ ರೆಡಿ ಆಗಿ ಅಲ್ಲಿಗೆ ಹೋದೆ. ಹೇಳಿ ಕೇಳಿ ಅದು ಲೇಡಿ ಗೆಟಪ್. ಮೇಕಪ್‌ಗೆ ಸಮಯ ಬೇಕಿತ್ತು. ಬೆಳಗ್ಗೆ ಹತ್ತು ಗಂಟೆಗೆ ಶೂಟಿಂಗ್ ಮುಗಿಬೇಕು ಅಂತ ಅಂದ್ಕೊಂಡಿದ್ದು, ಮತ್ತಷ್ಟು ಸಮಯ ಬೇಕಾಯಿತು.

ಮಾಲ್‌ಗೆ ಜನ್ರು ಬರತೊಡಗಿದ್ರು. ಬಂದವರೆಲ್ಲ , ಓ... ನೀವು ಶರಣ್ ಅಲ್ವಾ ಅಂತ ಮಾತನಾಡಿಸಿ, ಫೋಟೋ ತೆಗೆದುಕೊಳ್ಳುತ್ತಿದ್ರು. ಕೆಲವು ಮಹಿಳೆಯರಿಗೆ ನಾನ್ಯಾರು ಅಂತ ಗೊತ್ತಿಲ್ಲದಿದ್ದರೂ, ಆರ್ಟಿಸ್ಟ್ ಅಲ್ವಾ ಅಂತ ಮೈ ಮೇಲೆ ಬೀಳುವಷ್ಟು ಹತ್ತಿರ ಬಂದು ಫೋಟೋಕ್ಕೆ ಮುಖ ಕೊಡುತ್ತಿದ್ದರು.

ನಂಗೆ ಸಿಕ್ಕಾಪಟ್ಟೆ ಕಸಿವಿಸಿ, ಹ್ಯಾಗೋ ಮ್ಯಾನೇಜ್ ಮಾಡಿದೆ. ಈ ಫೋಟೋ ಹಾವಳಿಯಿಂದ ಅವಸರದಲ್ಲಿ ಶೂಟಿಂಗ್ ಮುಗಿಸಿಕೊಳ್ಳೋದು ಅನಿವಾರ್ಯ ಆಯ್ತು. ಶೂಟಿಂಗ್ ಶುರುವಾಯ್ತು. ಡೈರೆಕ್ಟರ್ ರೆಡಿ, ಟೇಕ್ ಅಂತಿದ್ರು. ಆದ್ರೆ ನನಗೆ ವಿಪರೀತ ಮೂತ್ರಬಾಧೆ ಶುರುವಾಯ್ತು. ಡೈರೆಕ್ಟರ್ ಕರೆಯುತ್ತಲೇ ಇದ್ರು. ಅಯ್ಯೋ ಇರಪ್ಪ ಸ್ವಲ್ಪ ಅಂತ ವಾಶ್‌ರೂಮ್ ಹುಡುಕ ತೊಡಗಿದೆ. ಡೋರ್‌ನಲ್ಲಿ ನಿಂತಿದ್ದ ವಾಚ್‌ಮನ್ ಹತ್ತಿರ ಹೋಗಿ, ಇಲ್ಲಿ ವಾಶ್‌ರೂಮ್ ಎಲ್ಲಿ ಅಂತ ಕೇಳಿದೆ. ಆತ ಕೇಳಿದ್ದು ಗಂಡಸಿನ ಧ್ವನಿ, ಆದ್ರೆ ನಾನಿದ್ದಿದ್ದು ಲೇಡಿಸ್ ಗೆಟಪ್. ಆತ ಗಾಬರಿಯಾಗಿ ಮುಖ ನೋಡಿದ. ಕೆಲಸ ಕೆಡ್ತು ಅಂತ ನಾನೇ ವಾಶ್‌ರೂಮ್ ಹುಡುಕ ತೊಡಗಿದೆ. ವಿಶೇಷ ಗೆಟಪ್ ಕಾರಣ ಅಲ್ಲಿದ್ದವರು ನನ್ನನ್ನೇ ನೋಡತೊಡಗಿದ್ರು. ನನಗೆ ಅವಸರ. ಅಂತೂ ವಾಶ್ ರೂಮ್ ಹುಡುಕಿದೆ. ಅದು ಸಿಕ್ಕಾಗ ನನಗೆ ಶುರುವಾಗಿದ್ದು ಎಲ್ಲಿಗೆ ಹೋಗೋದು ಅನ್ನೋ

ಪ್ರಶ್ನೆ. ಯಾಕಂದ್ರೆ, ನಾನು ಹಾಕಿದ್ದು ಲೇಡಿಸ್ ಗೆಟಪ್. ಹಾಗಂತ ಲೇಡಿಸ್ ವಾಶ್‌ರೂಮ್ ಗೆ ಹೋಗೋ ಹಾಗಿಲ್ಲ. ಜೆಂಟ್ಸ್ ಅಂತ ಗಂಡಸರ ವಾಶ್‌ರೂಮ್‌ಗೆ ಹೋದ್ರೆ, ಅಲ್ಲಿರುವ ಗಂಡಸರು ಗಾಬರಿ ಆಗ್ತಾರೆ, ಏನಪ್ಪಾ ಈ ಕತೆ ಅಂತ ಗೋಳಾಡಿದೆ. ಅಸಿಸ್ಟೆಂಟ್ ಕೂಗಿದೆ.

ಆತ ಬಂದ. ಅವ್ನ ಎಲ್ಲಿ ನಿಲ್ಲಿಸೋದು ಮತ್ತೆ ಎದುರಾದ ಪ್ರಶ್ನೆ. ಲೇಡಿಸ್ ವಾಶ್‌ರೂಮ್ ಮುಂದೆ ಆತನನ್ನು ನಿಲ್ಲಿಸಿ ಹೋದ್ರೆ ಹೆಂಗಸರಿಗೆ ಅನುಮಾನ. ಇದು ಮುಗಿಯದ ಕತೆ ಅಂತ ತಲೆ ಕೆಟ್ಟು ಹೋಯ್ತು. ಕಡೆಗೆ ಜೆಂಟ್ಸ್ ವಾಶ್‌ರೂಮ್ ಹತ್ತಿರ ಹೋಗಿ, ಅಸಿಸ್ಟೆಂಟ್‌ಗೆ ಒಂದು ಐಡಿಯಾ ಹೇಳಿಕೊಟ್ಟೆ. ಯಾರಾದ್ರು ಬಂದ್ರೆ ಕ್ಲಿನಿಂಗ್ ನಡೆಯುತ್ತಿದೆ ಅಂತ ಹೇಳಿ ಕಳಿಸು ಅಂತ ಸೂಚನೆ ಕೊಟ್ಟು ಮೂತ್ರಬಾಧೆ ಮುಗಿಸಿಕೊಂಡು ಬಂದೆ.

2 ) ಜರಾಜೇಂದ್ರ ಚಿತ್ರದ ಚಿತ್ರೀಕರಣದ ಸಮಯ. ಐಹೊಳೆ, ಬಾದಾಮಿಯಲ್ಲಿ ಶೂಟಿಂಗ್. ಕುದುರೆ ಮೇಲೆ ರಾಜೇಂದ್ರ ಸವಾರಿ ಮಾಡುವ ದೃಶ್ಯ. ಕುದುರೆ ಸವಾರಿ ನನಗೆ ಹೊಸದು. ಅಲ್ಲಿಯ ತನಕ ಯಾವುದೇ ಚಿತ್ರಕ್ಕೆ ಕುದುರೆ ಓಡಿಸಿದ ಅನುಭವ ಇರಲಿಲ್ಲ. ನಿರ್ದೇಶಕರಿಗೆ ಮೊದಲೇ ಹೇಳಿದ್ದೆ. ಅದಕ್ಕಂತಲೇ ನಾಲ್ಕೈದು ದಿವಸ ಬೆಂಗಳೂರಿನಲ್ಲಿ ಟ್ರೈನಿಂಗ್ ನಡೆದಿತ್ತು. ಅಲ್ಲಿಗೆ ತಂದಿದ್ದು ರೇಸ್ ಕುದುರೆ. ನಾನು ಹತ್ತಿ ಕುಳಿತರೆ ಸಲೀಸಾಗಿ ಓಡುತ್ತಿತ್ತು. ಇನ್ನೇನು ಕುದುರೆ ಸವಾರಿ ಸುಲಭವೇ ಬಿಡಿ ಸರ್ ಅಂತ ನಿರ್ದೇಶಕರಿಗೆ ಹೇಳಿದ್ದೆ. ಅವರು ಶೂಟಿಂಗ್ ಡೇಸ್ ಫಿಕ್ಸ್ ಮಾಡಿದ್ರು. ಬೆಳಗ್ಗೆ ಬಾದಾಮಿಯಲ್ಲಿ ಸೆಟ್‌ಗೆ ಹೋಗಿ ನಿಂತಾಗ ಎಲ್ಲ ಓಕೆ, ಆದ್ರೆ ಕುದುರೆ ಇರಲಿಲ್ಲ.

ನಿರ್ದೇಶಕರಿಗೆ ಕೇಳಿದೆ, ಅವರು ಮ್ಯಾನೇಜರ್‌ಗೆ ಫೋನ್ ಮಾಡಿ ಕೇಳಿದ್ರು. ‘ಸರ್ ಬಂದೇ ಬಿಡ್ತು, ಇನ್ನೇನು ಐದು ನಿಮಿಷ’ ಅಂದ್ರಂತೆ. ನಾವಿಬ್ಬರು ಸೀನ್ ಬಗ್ಗೆ ಚರ್ಚೆ ಮಾಡುವಾಗ ಒಂದು ಕುದುರೆ ಬಂತು. ನಂಗ್ಯಾಕೋ ಅನುಮಾನ. ಅದು ರೇಸ್ ಕುದುರೆ ತರ ಇರಲಿಲ್ಲ. ಆದ್ರೂ ಇರಲಿ ಅಂತ ಸುಮ್ಮನಾದೆ. ಎಲ್ಲರೂ ಬಂದ್ರು . ನಿರ್ದೇಶಕರು ರೆಡಿ.... ಟೇಕ್ ಅಂದ್ರು.

ಕುದುರೆ ಹತ್ತಿ, ಓಡಿಸಲು ಮುಂದಾದೆ. ಕುದುರೆ ಮಾತ್ರ ಮುಂದೆ ಹೋಗುತ್ತಿಲ್ಲ. ಸುಮಾರು ನಾಲ್ಕೈದು ಸಲ, ಹಾಗೆಯೇ ಆಯಿತು. ಕೊನೆಗೆ ಅದನ್ನು ಹಿಡಿದುಕೊಂಡು ಬಂದಿದ್ದವನನ್ನು ಕರೆದು, ಯಾಕೆ, ಏನಾಯ್ತು ಅಂತ ಕೇಳಿದೆ. ಆತ ಏನೊಂದು ಹೇಳಲ್ಲಿಲ್ಲ. ಹೇಗಾದ್ರೂ ಇರಲಿ, ನೀನು ಮುಂದೆ ಹೋಗಿ ನಿಲ್ಲಪ್ಪ ಅಂತ ಹೇಳಿದೆ. ಆತ ಮುಂದೆ ಹೋಗಿ ನಿಂತಾಗ ನಿರ್ದೇಶಕರು ‘ರೆಡಿ, ಟೇಕ್’ ಅಂದ್ರು.

ಕುದುರೆ ಜೋರಾಗಿ ಓಡುತ್ತಾ ಆತನ ಮುಂದೆ ಹೋಗಿ ನಿಂತಿತು. ಆದ್ರೆ ಸೀನ್‌ಗೆ ಮತ್ತಷ್ಟು ದೂರ ಹೋಗಬೇಕಿತ್ತು. ಆತನನ್ನು ಒಂದು ಪಕ್ಕದ ಗುಡ್ಡದ ಹತ್ತಿರ ಹೋಗಿ ನಿಲ್ಲಿಸಿ ಬರಲಾಯಿತು. ಕುದುರೆ ಆತನನ್ನೇ ನೋಡುತ್ತಿತ್ತು. ನನಗೆ ಭಯ ಶುರುವಾಯಿತು. ಇರಿ ಸ್ವಲ್ಪ ಅನ್ನುವಷ್ಟರಲ್ಲಿಯೇ, ನಿರ್ದೇಶಕರು ‘ರೆಡಿ ಟೇಕ್’ ಅಂದ್ರು. ಅಷ್ಟು ಹೇಳಿದ್ದೇ ತಡ, ಕುದುರೆ ಜಿಗಿದು ಓಡತೊಡಗಿತು. ನಿರ್ದೇಶಕರು ಕಟ್ ಹೇಳಿ ಆಗಿದೆ. ಅದು ನನಗೆ ಕೇಳಿಲ್ಲ. ಕುದುರೆ ಮಾತ್ರ ಓಡುತ್ತಲೇ ಇದೆ. ಕಂಟ್ರೋಲ್ ತಪ್ಪಿದೆ. ಅದಕ್ಕೆ ಯಾವುದೇ ಸಂಜ್ಞೆಗಳು ಗೊತ್ತಾಗುತ್ತಿಲ್ಲ. ಅದು ತನ್ನನ್ನು ಹಿಡಿದುಕೊಂಡು ಬಂದವನಿಗಾಗಿ ಹುಡುಕುತ್ತಿದೆ.

ಆತ ಗುಡ್ಡದ ಪಕ್ಕದ ಒಂದು ಪೊದೆಯಲ್ಲಿ ಅವಿತು ಕೊಂಡಿದ್ದಾನೆ. ಹೆಚ್ಚು ಕಡಿಮೆ ಅಲ್ಲಿ ತನಕ ಜೋರಾಗಿ ಓಡಿದ ಕುದುರೆ, ಪೊದೆ ಸಮೀಪಿಸುತ್ತಿದ್ದಂತೆ ನನ್ನನ್ನು ಎತ್ತಿ ಬಿಸಾಕಿತು. ಇನ್ನೇನು ನನ್ನ ಕತೆ ಮುಗಿಯಿತು ಅಂದುಕೊಂಡೆ. ಜೀವ ಕೈಯಲ್ಲಿ ಹಿಡಿದುಕೊಂಡು ಅದರ ಜುಟ್ಟು ಹಿಡಿದೆ. ಮತ್ತೆ ಝಾಡಿಸಿತು. ಆಯ ತಪ್ಪಿತು. ಬೀಳುವ ಭಯದಲ್ಲಿ ಅದರ ಕೊರಳು ಹಿಡಿದುಕೊಂಡು ಜೋತಾಡಿದೆ. ಅದರಲ್ಲೂ ಅದು ಓಡತೊಡಗಿತು. ಕಲ್ಲು, ಮುಳ್ಳು ಮೈಗೆ ತರೆದವು. ಇನ್ನೇನು ಕೈಬಿಟ್ಟು ನೆಲಕ್ಕೆ ಬೀಳಬೇಕು ಎಂದುಕೊಳ್ಳುವ ಹೊತ್ತಿಗೆ ಅದು ಪೊದೆ ಹತ್ತಿರ ಹೋಗಿ ನಿಂತುಕೊಂಡಿತು. ನೋಡಿದ್ರೆ ಆತ ಅಲ್ಲಿಯೇ ಇದ್ದ. ಅಂತೂ ಉಳಿಸಿದಿ ಕಣಪ್ಪಾ ಅಂತ ಸಿಟ್ಟಲ್ಲಿ ಹೇಳುತ್ತಾ ಲೊಕೇಷನ್ ಕಡೆ ಮುಖ ಮಾಡಿದೆ.

ಅಲ್ಲಿಗೆ ಬಂದಾಗ ಗೊತ್ತಾಯಿತು ಅದು ಟಾಂಗಾ ಗಾಡಿ ಕುದುರೆ ಅಂತ. ಆ ವೇಳೆಗೆ ಮ್ಯಾನೇಜರ್ ಭಯ ಪಟ್ಟು ನಿರ್ದೇಶಕರ ಹತ್ತಿರ ಅಸಲಿ ಕತೆ ಹೇಳಿದ್ದ. ರೇಸ್ ಕುದುರೆ ಸಿಗದ ಕಾರಣಕ್ಕೆ, ಒಂದು ಟಾಂಗಾ ಗಾಡಿ ಕುದುರೆಯನ್ನೇ ಅಲ್ಲಿಗೆ ತರಿಸಿದ್ದ. ಅದರ ರಹಸ್ಯ ಮಾತ್ರ ಆತ ಯಾರಿಗೂ ಹೇಳಿರಲಿಲ್ಲ. ಅದರ ಜತೆಗೆ ಅದರ ಮಾಲೀಕನನ್ನು ಕರೆಸಿದ್ದ. ಅದು ಆತನಿಲ್ಲದೆ ಓಡುವಂತಿಲ್ಲ, ಆತನು ಕಾಣದಿದ್ದರೆ ನಿಲ್ಲುವಂತಿಲ್ಲ. ಆ ಪರಿಸ್ಥಿತಿಯಲ್ಲಿ ನಾನು ಬಲಿಪಶು ಆಗಿದ್ದೆ. ಕೈಗೆ ಏಟಾಗಿತ್ತು. ರಕ್ತ ಸೋರುತ್ತಿತ್ತು. ಅದೇ ಸಿಟ್ಟಲ್ಲಿ ಮ್ಯಾನೇಜರ್‌ಗೆ ಬೈಯ್ದು ಸಮಾಧಾನ ಪಟ್ಟುಕೊಂಡೆ. ಕೊನೆಗೆ ಬೇರೆ ಕುದುರೆ ತರಿಸಿ, ಶೂಟಿಂಗ್ ಮಾಡಿದೆವು.

loader