ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದು ಖಂಡಿತಾ, ಜೈಲಿಗೆ ಹೋದರೂ ಸರಿಯೇ
ಬೆಂಗಳೂರು(ಮಾ.01): ಕನ್ನಡ ಚಿತ್ರೋದ್ಯಮವು ಮತ್ತೊಮ್ಮೆ ಡಬ್ಬಿಂಗ್ ವಿರುದ್ಧ ಸಿಡಿದೇಳುವ ಲಕ್ಷಣಗಳು ಗೋಚರಿಸುತ್ತಿವೆ. ನಟ ಜಗ್ಗೇಶ್ ಬಹಿರಂಗವಾಗಿ ಡಬ್ಬಂಗ್ ವಿರುದ್ಧ ಘೋಷಣೆ ಕೂಗಿದ್ದು, ಡಬ್ಬಿಂಗ್ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದು ಖಂಡಿತಾ, ಜೈಲಿಗೆ ಹೋದರೂ ಸರಿಯೇ ಡಬ್ಬಿಂಗ್ ಚಿತ್ರ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕೆಲವು ಜನರು ಡಬ್ಬಿಂಗ್ ಪರವಾಗಿದ್ದಾರೆ. ಪರಭಾಷಾ ಚಿತ್ರಗಳು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತವೆ. 17 ರಿಂದ 18 ಲಕ್ಷ ಜನ ತಮಿಳುನಾಡಲ್ಲಿ ಇದ್ದಾರೆ. ಆದರೆ ಅಲ್ಲಿ ಕನ್ನಡ ಚಿತ್ರಗಳು ರಿಲೀಸ್ ಆಗುವುದಿಲ್ಲ. ಹೊರ ರಾಜ್ಯದಲ್ಲಿ ಅವರ ಭಾಷೆಯ ಚಿತ್ರಗಳು ಹೆಚ್ಚು ಬಿಡುಗಡೆಯಾಗುತ್ತವೆ.ಬೇರೆ ಭಾಷೆಯ ಚಿತ್ರಗಳಿಗೆ ಹೆಚ್ಚಿನ ಆದ್ಯತೆಯಿರುವುದಿಲ್ಲ' ಎಂದು ಕನ್ನಡ ಚಿತ್ರಗಳ ದುಸ್ಥಿತಿಯ ಬಗ್ಗೆ ತಿಳಿಸಿದರು.
ಒಮ್ಮೆ ಡಬ್ಬಿಂಗ್ ಸಂಸ್ಕೃತಿ ರಾಜ್ಯಕ್ಕೆ ಕಾಲಿಟ್ಟರೆ ಚಾನಲ್'ಗಳಲ್ಲೂ ಅದೇ ಪ್ರಸಾರವಾಗಲು ಶುರುವಾಗುತ್ತವೆ. ರಾಜ್ಯದಲ್ಲಿ ಡಬ್ಬಿಂಗ್ಗಾಗಿ ವ್ಯವಸ್ಥಿತ ತಯಾರಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರ ಬಿಡುಗಡೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದರು.
ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಎಂ.ಎಸ್ .ರಮೇಶ್, ರಂಗಾಯಣ ರಘು ಕೂಡ ಡಬ್ಬಿಂಗ್ ವಿರುದ್ಧ ಮಾತನಾಡಿದರು. ತಮಿಳಿನ ಅಜಿತ್ ನಟನೆಯ ಎನ್ನೈ ಅರಿಂದಾಲ್ ಚಿತ್ರ ಕನ್ನಡಕ್ಕೆ ಸತ್ಯದೇವ್ ಐಪಿಎಸ್ ಅಂತ ಡಬ್ ಆಗಿದ್ದು, ಮಾರ್ಚ್ 3ರಂದು ರಾಜ್ಯದ 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
