ಸಿನಿಮಾದ ಬಿಟ್ಟಿ ಪ್ರಚಾರಕ್ಕಾಗಿ ನವನಾಯಕ ನಟನೊಬ್ಬ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ಮಾಡಿ ಬಳಿಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ನಾಟಕ ಸೃಷ್ಟಿಸಿ ವಿವಾದಕ್ಕೆ ಸಿಲುಕಿರುವ ಕುತೂಹಲಕಾರಿ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಬೆಂಗಳೂರು : ಸಿನಿಮಾದ ಬಿಟ್ಟಿ ಪ್ರಚಾರಕ್ಕಾಗಿ ನವನಾಯಕ ನಟನೊಬ್ಬ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ಮಾಡಿ ಬಳಿಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ನಾಟಕ ಸೃಷ್ಟಿಸಿ ವಿವಾದಕ್ಕೆ ಸಿಲುಕಿರುವ ಕುತೂಹಲಕಾರಿ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಕೆಎಚ್‌ಬಿ ಕಾಲೋನಿ ನಿವಾಸಿ ವಿಕ್ರಮ್ ಕಾರ್ತಿಕ್ ವಿವಾದಿತಕ್ಕೆ ಒಳಗಾಗಿರುವ ನಟ. ಶಂಕರಮಠದ ಮಾರ್ಗವಾಗಿ ಈತ ಮಂಗಳವಾರ ರಾತ್ರಿ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಕಿಡಿಗೇಡಿಗಳು ಹಲ್ಲೆ ನಡೆಸಿ ಕಾರಿನ ಸಮೇತ ಹಣ ಮತ್ತು ಮೊಬೈಲ್ ದೋಚಿದ್ದಾರೆ ಎಂದು ಬಸವೇಶ್ವರನಗರ ಠಾಣೆಯಲ್ಲಿ ವಿಕ್ರಮ್ ದೂರು ದಾಖಲಿಸಿದ್ದರು. ಅದರನ್ವಯ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಹಲ್ಲೆ ಹಿಂದಿನ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಕ್ರಮ್ ದೂರಿನಲ್ಲೇನಿದೆ?: ನನ್ನ ಸ್ನೇಹಿತನನ್ನು ಮನೆಗೆ ಬಿಟ್ಟು ಮಂಗವಾರ ರಾತ್ರಿ 11.30ರ ಸುಮಾರಿಗೆ ಮನೆಗೆ ಸ್ಪಿಫ್ಟ್ ಕಾರಿನಲ್ಲಿ ತೆರಳುತ್ತಿದ್ದೆ. ಆಗ ಮಾರ್ಗ ಮಧ್ಯೆ ಬಸವೇಶ್ವರನಗರ ವಾಟರ್ ಟ್ಯಾಂಕ್ ಹತ್ತಿರ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದರು.

ಘಟನೆಯಲ್ಲಿ ಗಂಭೀರವಾಗಿ ಗಾಯವಾಗಿದ್ದು, ಸ್ಥಳೀಯರ ನೆರವು ಪಡೆದು ಪುಣ್ಯ ಆಸ್ಪತ್ರೆಗೆ ದಾಖಲಾದೆ ಎಂದು ಬಸವೇಶ್ವರ ನಗರ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ನನ್ನ ಬಳಿ ಇದ್ದ 50 ಸಾವಿರ ಹಣ, ಆಧಾರ್ ಕಾರ್ಡ್, ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸಿನಿಮಾದ ಹಾರ್ಡ್‌ಡಿಸ್ಕ್‌ಗಳನ್ನು ಕಿಡಿಗೇಡಿಗಳು ದೋಚಿದ್ದಾರೆ. ನಂತರ ನನ್ನ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ವಿಕ್ರಮ್ ಹೇಳಿದ್ದಾರೆ.

ಹಲ್ಲೆ ಕತೆ ಕಟ್ಟಿದ: ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಕ್ಷಣವೇ ಕಿಡಿಗೇಡಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಘಟನಾ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಅಲ್ಲಿನ ಸಿಸಿಟೀವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದರು. ಆಗ ಹಲ್ಲೆ ಸಂಬಂಧ ಯಾವುದೇ ಸುಳಿವು ಸಿಗಲಿಲ್ಲ.

ಆ ವೇಳೆ ಶಂಕರಮಠದ ಬಳಿ ರಾತ್ರಿ ಕಾರುಗಳ ನಡುವೆ ಅಪಘಾತ ನಡೆದ ಸಂಗತಿ ಗೊತ್ತಾಯಿತು. ನಂತರ ಅಲ್ಲಿಗೆ ತೆರಳಿ ವಿಚಾರಿಸಿದಾಗ ವಿಕ್ರಮ್ ಮೇಲಿನ ಹಲ್ಲೆ ಕೃತ್ಯ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.