ಬೆಂಗಳೂರು(ನ.15): ನಿರ್ಮಾಪಕನ ಸಂಬಂಧಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೊಲೆ ಬೆದರಿಕೆ ಆರೋಪದಡಿ ದುನಿಯಾ ವಿಜಿಯನ್ನು ಬಂಧಿಸಲಾಗಿದೆ.

ಈಗಾಗಲೇ ಬಂಧಿಸಲಾಗಿರುವ ವಿಜಿ ವಿರುದ್ಧ ಐಪಿಸಿ 323, 504, 506, 509 ಅಡಿಯಲ್ಲಿ ಎಫ್'ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣಗಳಲ್ಲಿ ಆರೋಪಿಗೆ ಠಾಣೆಯಲ್ಲೇ  ಜಾಮೀನು ಸಿಗುವ ಸಾಧ್ಯತೆಗಳಿವೆ. ಇದರೊಂದಿಗೆ ನ್ಯಾಯಾಧೀಶರ ಎದುರೂ ದುನಿಯಾ ವಿಜಯ್​ರನ್ನು ಹಾಜರುಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಠಾಣೆ ಜಾಮೀನು ಕೊಡಬಹುದಾ ಅಥವಾ ಜಡ್ಜ್​ ಹಾಜರುಪಡಿಸಬೇಕಾ ಎಂಬುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟದ್ದು ಹಾಗಾಗಿ, ದುನಿಯಾ ವಿಜಯ್​ ಜೈಲಿಗೆ ಹೋಗುವ ಸಾಧ್ಯತೆ ಕಡಿಮೆ

ಘಟನೆ ನಡೆದಿದ್ದು ಹೇಗೆ?

ಮಾಸ್ತಿಗುಡಿ ನಿರ್ಮಾಪಕ ಸುಂದರ್​ ಗೌಡ ಅಣ್ಣ ಶಂಕರ್​ಗೌಡ 3 ತಿಂಗಳ ಹಿಂದೆ ಮಾನಸ ಎಂಬುವರನ್ನು ಮದುವೆಯಾಗಿದ್ದರು. ಫೇಸ್​​ಬುಕ್​​ನಲ್ಲಿ ಪರಿಚಯವಾಗಿ ಶಂಕರ್​ಗೌಡ-ಮಾನಸ ಮದುವೆಯಾಗಿದ್ದರು. ಮದುವೆಯಾದ ದಿನದಿಂದಲೂ ಮಾನಸಳಿಗೆ ಶಂಕರ್​ಗೌಡ ಕುಟುಂಬದವರು ಕಿರುಕುಳ ನೀಡುತ್ತಿದ್ದು, ಮನಸಾ ಭೇಟಿಗೆ ತಂದೆ ಜಯರಾಮ್​, ತಾಯಿ ಯಶೋಧಮ್ಮಗೆ ಅವಕಾಶ ನೀಡುತ್ತಿರಲಿಲ್ಲ. ಈ ಕುರಿತು ತಂದೆ ಜಯರಾಮ್​ ಜತೆ ಮಾನಸಾ ನೋವು ಹಂಚಿಕೊಂಡಿದ್ದಳು.

ಈ ಬಗ್ಗೆ ವಿಚಾರಿಸಲು ಇಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಶಂಕರ್​ಗೌಡ ನಿವಾಸಕ್ಕೆ ಜಯರಾಮ್ ತೆರಳಿದ್ದರು. ಸಂಧಾನಕ್ಕಾಗಿ ನಟ ದುನಿಯಾ ವಿಜಯ್​​ರನ್ನು ಕರೆಸಿಕೊಂಡ ಶಂಕರ್​​ಗೌಡ ಮಾನಸಾ ತಂದೆ ಜಯರಾಮ್​​ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಯರಾಮ್​ ಮೇಲೆ ಹಲ್ಲೆ ನಡೆಸಿದ್ದ ದುನಿಯಾ ವಿಜಿ ಜಯರಾಮ್​ಗೆ ಕಪಾಳ ಮೋಕ್ಷ ಮಾಡಿ, ಎದೆಗೆ ಗುದ್ದಿದ್ದರು.

ಇದರಿಂದ ಅಸ್ವಸ್ಥಗೊಂಡಿದ್ದ ಜಯರಾಮ್​​ರನ್ನು ಗಾಂಧಿಬಜಾರ್​ ಬಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯ ಬಳಿಕ  ಜಯರಾಮ್ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಆಸ್ಪತ್ರೆಗೆ ತೆರಳಿ ಚನ್ನಮ್ಮನಕೆರೆ ಅಚ್ಚುಕಟ್ಟು  ಪೊಲೀಸರು ಅಸ್ವಸ್ಥ ಜಯರಾಮ್​ ಹೇಳಿಕೆ ಪಡೆದಿದ್ದರು.

ಆದರೆ ಮಾಧ್ಯಮಗಳು ಜಯರಾಮ್​ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ ಮತ್ತೆ ವಿಜಿ ಶಂಕರ್​ಗೌಡ- ಮಾನಸಾ ರಾಜೀ ಸಂಧಾನಕ್ಕೆ ಮುಂದಾಗಿದ್ದು, ಮಾನಸ ದುನಿಯಾ ವಿಜಿ ಯಾವುದೇ ಹಲ್ಲೆ ನಡೆಸಿಲ್ಲ ಎಂದು ಶಂಕರ್ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಆದರೆ, ಜಯರಾಮ್​ ಪತ್ನಿ ಯಶೋಧ ಈ ರಾಜಿ ಸಂಧಾನ ತಳ್ಳಿ ಹಾಕಿದ್ದರು. ಹೀಗಾಗಿ ಶಂಕರ್​ಗೌಡ ನಿವಾಸಕ್ಕೆ ತೆರಳಿ ದುನಿಯಾ ವಿಜಯ್​ ವಿಚಾರಣೆ ನಡೆಸಿದ ಪೊಲೀಸರು ವಿಜಿಯನ್ನು ಬಂಧಿಸಿದ್ದಾರೆ.