ಮಂಡ್ಯ(ಸೆ. 08): ತನಗೆ ಪೊಲೀಸ್ ಸೆಕ್ಯೂರಿಟಿ ಕೊಟ್ಟರೆ ಕಾವೇರಿ ಹೋರಾಟದಲ್ಲಿ ರೈತರ ಜೊತೆಗೂಡುತ್ತೇನೆ ಎಂದು ನಟಿ ರಮ್ಯಾ ನಿನ್ನೆ ನೀಡಿದ ಹೇಳಿಕೆಗೆ ನಟ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಇಂದು ಇಲ್ಲಿ ರೈತರ ಪ್ರತಿಭಟನೆಗೆ ಚಿತ್ರರಂಗದವರ ಜೊತೆ ಧುಮುಕಿದ ದರ್ಶನ್, ಜನರ ಬಳಿ ಬರಲು ತನಗೆ ಯಾವ ಭದ್ರತೆಯೂ ಬೇಕಿಲ್ಲ ಎಂದು ಹೇಳಿದ್ದಾರೆ.

ನಿನ್ನೆ ರಾತ್ರಿ ನಟಿ ರಮ್ಯಾ ಮಂಡ್ಯಕ್ಕೆ ಬಂದು ಪ್ರತಿಭಟನಾಕಾರರನ್ನು ಭೇಟಿ ಮಾಡಿ ಹೋಗಿದ್ದರು. ಇತ್ತೀಚೆಗೆ ಅವರ ಮೇಲೆ ನಡೆದ ದಾಳಿಯ ಕಾರಣವೊಡ್ಡಿ, ತನಗೆ ಪೊಲೀಸ್ ಭದ್ರತೆ ಒದಗಿಸಿದರೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದರು. ರಮ್ಯಾ ಅವರ ಈ ಮಾತನ್ನು ಕೆಲ ಕಾವೇರಿ ಹೋರಾಟಗಾರರು ಖಂಡಿಸಿದ್ದಾರೆ.

ಇನ್ನು, ಗುರುವಾರ ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟ ದರ್ಶನ್, ತಾನು ಮಂಡ್ಯಕ್ಕೆ ಇದೇ ಮೊದಲ ಬಾರಿ ಬಂದಿಲ್ಲ. ಹಿಂದೆ ಯಾವಾಗೆಲ್ಲಾ ಹೋರಾಟ ನಡೆದಿತ್ತೋ ಆವಾಗೆಲ್ಲಾ ಇಲ್ಲಿ ಬಂದು ಪಾಲ್ಗೊಂಡಿದ್ದೇನೆ. ತಾನೊಬ್ಬ ಕಲಾವಿದನಾಗಿಯಲ್ಲ, ರೈತನಾಗಿ ಬಂದಿದ್ದೇನೆ. ತನಗೆ ಯಾವ ಸೆಕ್ಯೂರಿಟಿಯೂ ಇಲ್ಲ ಎಂದು ತಿಳಿಸಿದ್ದಾರೆ.

ಸರಕಾರಕ್ಕೆ ಹೇಳುವಷ್ಟು ತಾನು ದೊಡ್ಡವನಲ್ಲ. ಒಟ್ಟಿನಲ್ಲಿ ರೈತರಿಗೆ ಅನ್ಯಾಯವಾಗಬಾರದು ಅಷ್ಟೇ ಎಂದು ಹೇಳಿದ ಚಾಲೆಂಜಿಂಗ್ ಸ್ಟಾರ್, ಕಾವೇರಿ ಹೋರಾಟಕ್ಕೆ ಮಂಡ್ಯದ ಜನರು ಮಾತ್ರವಲ್ಲ ಬೆಂಗಳೂರಿಗರೂ ಪಾಲ್ಗೊಳ್ಳಬೇಕು ಎಂದು ಕರೆನೀಡಿದ್ದಾರೆ.