ಬೆಂಗಳೂರು(ಸೆ.14): ಇದು ಸರ್ಕಾರಕ್ಕೆ ಸುವರ್ಣ ನ್ಯೂಸ್ ಹಾಕುತ್ತಿರುವ ಇನ್ನೊಂದು ಸವಾಲ್. ಸಾಕ್ಷಿ ಸಿಕ್ಕರೆ, ಒತ್ತುವರಿ ಮಾಡಿದ್ದರೆ, ಅದನ್ನು ಕೆಡವಿಯೇ ಸಿದ್ಧ. ಯಾವ ಪ್ರಭಾವಿಗಳಿದ್ದರೂ ಅಷ್ಟೆ, ಬಿಡುವುದಿಲ್ಲ ಅಂತೆಲ್ಲ ಹೇಳಿದ್ದ ಸರ್ಕಾರದ ಎದುರು ಸುವರ್ಣ ನ್ಯೂಸ್ ಈಗ ಇನ್ನೊಂದು ದಾಖಲೆಯನ್ನಿಡುತ್ತಿದೆ. ಇದು ಸರ್ಕಾರಕ್ಕೆ ನಾವು ಹಾಕುತ್ತಿರುವ ಬಿಗ್ ಚಾಲೆಂಜ್.

ಇದು ಬೆಂಗಳೂರಿನ ರಾಜಾಕಾಲುವೆ ಒತ್ತುವರಿ ಕಥೆ. ಬೆಂಗಳೂರಿನಲ್ಲಿ ಪ್ರವಾಹ ಶುರುವಾದಾಗ ರಾಜ್ಯ ಸರ್ಕಾರ ಒತ್ತುವರಿ ಮನೆಗಳನ್ನು ಹುಡುಕೀ ಹುಡುಕೀ ಒಡೆಯುವ ಕೆಲಸಕ್ಕೆ ಕೈ ಹಾಕಿತ್ತು. ಆದರೆ, ಬಡವರ, ಮಧ್ಯಮ ವರ್ಗದವರ ಮನೆಗಳನ್ನು ಹೊಡೆದ ಸರ್ಕಾರ, ಆ ಒತ್ತುವರಿಯಲ್ಲಿ ದೊಡ್ಡವರೂ ಇದ್ದಾರೆ ಎಂದು ಗೊತ್ತಾದ ತಕ್ಷಣ, ಮೌನಕ್ಕೆ ಶರಣಾಗಿ ಹೋಯಿತು. ಒತ್ತುವರಿ ತೆರವು ಕಾರ್ಯಾಚರಣೆಗೆ ಬ್ರೇಕ್ ಹಾಕಿತು. ಆಗ ಕೇಳಿ ಬಂದ ದೊಡ್ಡವರ ಹೆಸರಲ್ಲಿ ಒರಾಯನ್ ಮಾಲ್ ಇತ್ತು. ಆ ದಾಖಲೆಗಳು ಸುವರ್ಣ ನ್ಯೂಸ್​'ಗೆ ಸಿಕ್ಕಿದ್ದರೂ, ಪಾಪ ಇನ್ನೂ ಬಿಬಿಎಂಪಿಯವರಿಗೆ ಸಿಕ್ಕಿಲ್ಲ. ಈಗ ಇನ್ನೊಂದು ದಾಖಲೆ ಸಿಕ್ಕಿದೆ. ಇದೂ ಕೂಡಾ ದೊಡ್ಡವರ ಕಥೆ.

ಅದರಲ್ಲಿ ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಮನೆ ರಾಜಾಕಾಲುವೆ ಮೇಲಿದೆ ಎನ್ನುವ ಆರೋಪವಿತ್ತು. ನೀವು ಒತ್ತುವರಿ ಮಾಡಿದ್ದೀರಾ ಎಂದು ಕೇಳಿದಾಗ ದರ್ಶನ್ ಹಾಗೇನಾದರೂ ಆಗಿದ್ದರೆ, ನಾನೇ ಒಡೆದು ಹಾಕ್ತೀನಿ ಅಂದಿದ್ದರು.
ಆದರೆ ದರ್ಶನ್ ಹೀಗೆ ಚಾಲೆಂಜ್ ಹಾಕುವುದಕ್ಕೂ ಮುನ್ನವೇ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ದರ್ಶನ್'​ಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದರು.

ರಾಜಾಕಾಲುವೆ ಮೇಲೆಯೇ ನಿರ್ಮಾಣವಾಗಿದೆ ದರ್ಶನ್ ಮನೆ: ಕೊಟ್ಟ ಮಾತು ಉಳಿಸಿಕೊಳ್ತಾರಾ ನಟ ದರ್ಶನ್..?

ರಾಜಾರಾಜೇಶ್ವರಿ ನಗರದಲ್ಲಿ ನಟ ದರ್ಶನ್​ ಕಟ್ಕೊಂಡಿರುವ ಮನೆ ತೂಗುದೀಪ, ಇದೇ ರಾಜಾಕಾಲುವೆ ಮೇಲಿದೆ. ಇದು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್, ​ ಬಿಬಿಎಂಪಿ ಆಯುಕ್ತರಿಗೆ ಕೊಟ್ಟಿರುವ ವರದಿಯಿಂದ ಸಾಬೀತಾಗಿದೆ.

ರಾಜಾಕಾಲುವೆ ಮೇಲೆ ದರ್ಶನ್ ಮನೆ..!

ರಾಜಾಕಾಲುವೆ ಮಧ್ಯದಲ್ಲೇ ಎರಡು ಗುಂಟೆ ವಿಸ್ತೀರ್ಣದಲ್ಲೇ 'ತೂಗುದೀಪ' ನಿಲಯ ನಿರ್ಮಾಣವಾಗಿದೆ. ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿಯ ಹಲಗೇವಡೇರಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್​ 38 ಸೇರಿದಂತೆ ಒಟ್ಟು 14 ಸರ್ವೆ ನಂಬರ್​ಗಳಿವೆ. ಒಟ್ಟು 7 ಎಕರೆ 31 ಗುಂಟೆ ಜಾಗವಿದೆ ಈ ಪ್ರದೇಶದಲ್ಲಿ ಐಡಿಯಲ್​ ಗೃಹ ನಿರ್ಮಾಣ ಸಹಕಾರ ಸಂಘ ಮನೆ ಕಟ್ಟಿದೆ. ಅಲ್ಲಿಯೇ ದರ್ಶನ್ ಮನೆ ಕೂಡಾ ಬರುತ್ತದೆ.

ದೊಡ್ಡವರಿಗೆ ಚಾಲೆಂಜ್ ದರ್ಶನ್​ಗಷ್ಟೇ ಅಲ್ಲ..?: ರಾಜಾಕಾಲುವೆ ಮೇಲೆ ಶಾಮನೂರು ಆಸ್ಪತ್ರೆ..!

ಎಸ್.ಎಸ್. ಆಸ್ಪತ್ರೆ ಅಂದರೆ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೆಸರಿನ ಆಸ್ಪತ್ರೆ. ಈ ಆಸ್ಪತ್ರೆ 22 ಗುಂಟೆ ಜಾಗದಲ್ಲಿದೆ. ಈ ಆಸ್ಪತ್ರೆಯ ಮಧ್ಯಭಾಗದಲ್ಲೇ ರಾಜಾಕಾಲುವೆ ಇತ್ತು. ಹಾಗೆ ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ಸನ್ಮಾನ್ಯ ಮಾಜಿ ಸಚಿವರು ಆಸ್ಪತ್ರೆ ನಿರ್ಮಿಸಿದ್ದಾರೆ. ಅಂದಹಾಗೆ ಈ ವರದಿ ಸೆಪ್ಟೆಂಬರ್ 8ರಂದೇ ಬಿಬಿಎಂಪಿ ಕಮಿಷನರ್ ಕೈಸೇರಿದೆ. ಈಗ ದೊಡ್ಡವರಿಗೆ ಚಾಲೆಂಜ್. ಆ ಚಾಲೆಂಜ್'ನ್ನು ಸರ್ಕಾರ, ಮಾಜಿ ಸಚಿವ, ಚಿತ್ರನಟ ದರ್ಶನ್​ ಎಲ್ಲರೂ ಸ್ವೀಕರಿಸಬೇಕು.

ಈಗ ಸುವರ್ಣ ನ್ಯೂಸ್ ಹಾಕಿದ ಚಾಲೆಂಜ್'ನಿಂದಾಗಿ ಚಿತ್ರನಟ ದರ್ಶನ್ ಮನೆ ವಿಚಾರದಲ್ಲಿ ಒತ್ತುವರಿ ಸಾಬೀತಾಗಿದೆ. ಹೀಗಾಗಿ ದರ್ಶನ್ ನುಡಿದಂತೆ ನಡೆದುಕೊಂಡು ತನ್ನ ಮನೆಯನ್ನು ತಾವೇ ಕೆಡವುತ್ತಾರಾ ಎಂದು ನೋಡಬೇಕಾಗಿದೆ. ಇನ್ನು ಸರ್ಕಾರ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಆಸ್ಪತ್ರೆ ಒಡೆದು ಹಾಕ್ತಾರಾ ಎಂಬುವುದಕ್ಕೂ ಕಾಲವೇ ಉತ್ತರ ನೀಡಲಿದೆ.

ಒಟ್ಟಾರೆಯಾಗಿ ಎಷ್ಟೇ ದೊಡ್ಡವರಾದರೂ, ಕಾನೂನು ಎಲ್ಲರಿಗೂ ಒಂದೇ, ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳುತ್ತೇವೆ ಎಂದ ಸರ್ಕಾರ ಮುಂದೇನು ಮಾಡುತ್ತದೆ ಎಂದು ನೋಡಬೇಕಿದೆ. ಅಷ್ಟೇ ಅಲ್ಲದೆ, ವರದಿ ಬರುವ ಮುಂಚೆಯೇ ಕ್ಲೀನ್ ಚಿಟ್ ಕೊಟ್ಟಿದ್ದ ಸನ್ಮಾನ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ ಕೂಡಾ ಉತ್ತರಿಸಬೇಕು.