ಬೆಂಗಳೂರು (ಅ.01): ‘‘ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಗಳು ಖಾಸಗಿ ಔಷಧಾಲಯಗಳಲ್ಲಿ ಔಷಧಿಗಳನ್ನು ಖರೀದಿಸುವಂತೆ ಚೀಟಿ ಬರೆದುಕೊಡುವ ಪದ್ಧತಿ ನಿಷೇಧಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು,'' ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
‘‘ಟಿ.ಎನ್.ಸೀತಾರಾಂ ನಿರ್ದೇಶನದ ಮನ್ವಂತರ ಧಾರವಾಹಿಯಲ್ಲಿ ನಾನು ಮುಖ್ಯಮಂತ್ರಿಯ ಪಾತ್ರ ವಹಿಸಿದ್ದೆ. ಆಗ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಭ್ರಷ್ಟವೈದ್ಯರನ್ನು ಅಮಾನತು ಮಾಡುತ್ತಿದೆ. ಈಗ ನಿಜವಾಗಿ ಆರೋಗ್ಯ ಸಚಿವನಾಗಿದ್ದೇನೆ. ಧಾರಾ ವಾಹಿ ಮಾದರಿಯಲ್ಲಿಯೇ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಮನ್ವಂತರ ಧಾರವಾಹಿಯಲ್ಲಿನ ನನ್ನ ಪಾತ್ರ ಮರಳಿ ನನಗೆ ರಾಜಕೀಯ ನೆಲೆ ನೀಡಿತು,'' ಎಂದು ಸ್ಮರಿಸಿದರು.
ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ‘‘ಶಾಸಕರು ವಿಧೇಯಕಗಳನ್ನು ಮಾಡುವುದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿಧೇಯಕಗಳ ಮೇಲೆ ಚರ್ಚೆ, ರಚನಾತ್ಮಕ ಟೀಕೆಗಳು ನಡೆಯುತ್ತಿಲ್ಲ. ಹೀಗಾಗಿ ವಿಧಾನಸಭೆ ತನ್ನ ಅರ್ಥ ಕಳೆದುಕೊಂಡಿದೆ. ಶಾಸಕರ ಚರ್ಚೆ ಇಲ್ಲದೆ ಮಂಡನೆಯಾಗುತ್ತುವ ಕಾನೂನುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿವೆ. ಇನ್ನು ಕೆಲ ಕಾನೂನುಗಳು ಭಷ್ಟರಿಗೆ ಅಸ್ತ್ರವಾಗಿ ಪರಿಣಮಿಸಿವೆ,'' ಎಂದು ಬೇಸರ ವ್ಯಕ್ತಪಡಿಸಿದರು.
‘ಏಷ್ಯಾ ನೆಟ್ ನ್ಯೂಸ್ ನೆಟ್‌ವರ್ಕ್ ಲಿಮಿಟೆಡ್'ನ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಮಾತನಾಡಿ, ‘ನಾನು ಎಲ್ಲರೊಂದಿಗೆ ಬೆರೆಯುವುದಿಲ್ಲ ಎಂಬ ಆರೋಪಗಳಿವೆ. ಆದರೆ, ರಾಜಕಾರಣಿಗಳ ಬಗ್ಗೆ ಎಷ್ಟುಹಗುರವಾಗಿ ಮಾತನಾಡುತ್ತಾರೋ, ಪತ್ರಿಕಾ ಸಂಪಾದಕರ ಬಗೆಗೂ ಅಷ್ಟೇ ಹಗುರವಾಗಿ ಮಾತನಾಡುವ ಪ್ರವೃತ್ತಿ ಬೆಳೆಯುತ್ತಿದೆ. ಹೀಗಾಗಿ ಕೆಲವೊಮ್ಮೆ ಅಂತರ ಕಾಯ್ದುಕೊಳ್ಳುವುದು ಆರೋಗ್ಯಕರ ಹಾಗೂ ವೃತ್ತಿ ಬದ್ಧತೆಗೆ ಪೂರಕ,'' ಎಂದು ತಿಳಿಸಿದರು.
‘‘ಬಹಳ ಅದ್ಬುತವಾಗಿ ಭಾಷಣ ಮಾಡಿ, ನಾಳೆಯೇ ಎಲ್ಲವೂ ಆಗಿ ಹೋಯಿತು, ನಾಳೆಯಿಂದ ಸ್ವರ್ಗದ ಬಾಗಿಲು ತೆರೆದೇ ಬಿಟ್ಟಿತು ಎಂದು ಮಾತನಾಡಿ 2014ರಿಂದ ಈವರೆಗೆ ಏನಾಗಿದೆ ಎಂಬುದು ನಮಗೆಲ್ಲ ತಿಳಿದಿದೆ. ಅದ್ಭುತವಾಗಿ ಮಾತನಾಡುವವರ ಒಂದು ವಲಯವಿದೆಯಾದರೂ, ಮಾತುಗಾರಿಕೆ ಜತೆಗೆ ಬದ್ಧತೆ ಇರುವುದು ಬಹಳ ಮುಖ್ಯವಾಗುತ್ತದೆ. ಅಂತಹ ಮಾತುಗಾರಿಕೆ ಮತ್ತು ಬದ್ಧತೆ ರಮೇಶ್ ಕುಮಾರ್ ಮತ್ತು ವೇದಿಕೆಯಲ್ಲಿರುವ ಇತರರಲ್ಲೂ ಇದೆ,'' ಎಂದರು.
‘‘ತರ್ಕದ ಮೂಲಕ ಮಾತನಾಡುವವರಿಗೆ ಅಂತಃಕರಣ ಇರುವುದಿಲ್ಲ. ರಮೇಶ್ ಕುಮಾರ್ ಬದ್ಧತೆಯಿರುವ ರಾಜಕಾರಣಿ. ಅವರೊಂದಿಗೆ ಹೆಚ್ಚು ಒಡನಾಟವಿಲ್ಲದಿದ್ದರೂ ಅವರ ಬಗ್ಗೆ ಹಾಗೂ ಅವರ ರಾಜಕಾರಣದ ಶೈಲಿ ನನಗೆ ಇಷ್ಟ. ವರ್ತಮಾನದ ರಾಜಕಾರಣದಲ್ಲಿ ಉತ್ತಮ ಸಂಸದೀಯ ಪಟುಗಳ ಪೈಕಿ ಶ್ರೇಷ್ಠರು, ಆಡಳಿತಾರೂಢ ಪಕ್ಷದಲ್ಲೇ ಇದ್ದು, ಅದೇ ಸರ್ಕಾರದ ಲೋಪಗಳನ್ನು ಟೀಕಿಸುವ ಛಾತಿ ರಮೇಶ್ ಕುಮಾರ್ ಹೊಂದಿದ್ದಾರೆ,'' ಎಂದರು.
‘‘ಇಂದಿರಾಗಾಂಧಿ ಅವರಿಗೆ ಸಂವಿಧಾನಾತ್ಮಕ ಕಾನೂನು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. Öಾಗಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು ಎಂಬುದಾಗಿ ನನ್ನ ಗುರುಗಳಾದ ಶಾರದಾ ಪ್ರಸಾದ್ ಅವರು ಸದಾ ಹೇಳುತ್ತಿದ್ದರು. ಹಾಗಾದರೆ, ಸಂವಿಧಾನಾತ್ಮಕ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವವರು ಯಾರು ಎಂದು ಅವರನ್ನು ಪ್ರಶ್ನಿಸಿದ್ದೆ. ಆಗ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಂವಿಧಾನಾತ್ಮಕ ಕಾನೂನನ್ನು ಅರ್ಥ ಮಾಡಿಕೊಂಡಷ್ಟುಮತ್ಯಾರು ಅರ್ಥ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದರು. ಅಂಥ ನಾಯಕರ ಗರಡಿಯಲ್ಲಿ ಸಾಕಷ್ಟುನಾಯಕರು ಬೆಳೆದಿದ್ದಾರೆ. ಎರಡನೇ ಹಂತದ ನಾಯಕತ್ವ ಕರ್ನಾಟಕದಲ್ಲಿ ಬೆಳೆದಿದೆ ಎಂದರೆ ಅದಕ್ಕೆ ರಾಮಕೃಷ್ಣ ಹೆಗ್ಡೆ ಹಾಗೂ ದೇವೇಗೌಡ ಅವರೇ ಕಾರಣ,'' ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘‘ಕಾವೇರಿ ವಿಚಾರದಲ್ಲಿ ಮೂರು ದಿನಗಳಿಗೊಮ್ಮೆ ವಿಚಾರಣೆ ಮಾಡುವಷ್ಟುಬಿಡುವು ಸುಪ್ರೀಂ ಕೋರ್ಟ್‌ಗಿದೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ಮೇಲೆ ಕೂತು ಹಳ್ಳಿಗೌಡರ ರೀತಿಯಲ್ಲಿ ಎದುರಿಸುವುದು ನಡೆಯುತ್ತಿದೆ. ಇತ್ತೀಚೆಗೆ ತೀರ್ಪು ನೀಡುವ ವೇಳೆ ನ್ಯಾಯಮೂರ್ತಿಗಳು ‘ನೋ ಬಡಿ ಈಸ್ ಎಬೋ ದಿ ಲಾ' ಎಂದಿದ್ದಾರೆ. ಅವರು ಸಹ ‘ಎಬೋ ದಿ ಲಾ' ಮೀರಿದವರಲ್ಲ ಎಂಬುದನ್ನು ಅವರು ಅರಿಯಬೇಕಿದೆ,'' ಎಂದರು.
-ಕನ್ನಡಪ್ರಭ ವರದಿ
