ಶುಕ್ರವಾರ ವಿವಿಧೆಡೆ ದಾಳಿ ನಡಿಸಿದ್ದ ಎಸಿಬಿ ತಂಡ ತನ್ನ ದಾಳಿಯನ್ನು ಮುಂದುವರಿಸಿದೆ. ರಾವ್ ಅವರ ಬಳಿ ಸಿಕ್ಕ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ಆಭರಣಗಳು, ಆಂಧ್ರದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಸ್ತಿ, ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಗಳು, ವಿವಿಧ ಕಂಪನಿಗಳಲ್ಲಿ ಬಂಡವಾಳ ಹೂಡಿಕೆಗಳನ್ನು ಕಂಡು ಎಸಿಬಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ

ಹೈದರಾಬಾದ್(ಜೂ.24): ಕೇಂದ್ರೀಯ ತನಿಖಾ ದಳದ ಭ್ರಷ್ಟಾಚಾರ- ನಿಗ್ರಹ ಪಡೆಯ ಅಧಿಕಾರಿಗಳು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ವಿವಿಧ ಸ್ಥಳಗಳಲ್ಲಿ 24 ಗಂಟೆಗಳ ಕಾರ್ಯಾಚರಣೆ ನಡೆಸಿ, ಸಾರ್ವಜನಿಕ ಆರೋಗ್ಯ ಮತ್ತು ಪುರಸಭೆಯ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್, ಪಾಮು ಪಾಂಡುರಂಗ ರಾವ್ ಅವರಿಗೆ ಸೇರಿದ 800 ಕೋಟಿ ರು. ಅಕ್ರಮ ಆಸ್ತಿಯನ್ನು ಬಯಲಿಗೆಳೆದಿದೆ.

ಶುಕ್ರವಾರ ವಿವಿಧೆಡೆ ದಾಳಿ ನಡಿಸಿದ್ದ ಎಸಿಬಿ ತಂಡ ತನ್ನ ದಾಳಿಯನ್ನು ಮುಂದುವರಿಸಿದೆ. ರಾವ್ ಅವರ ಬಳಿ ಸಿಕ್ಕ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ಆಭರಣಗಳು, ಆಂಧ್ರದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಸ್ತಿ, ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಗಳು, ವಿವಿಧ ಕಂಪನಿಗಳಲ್ಲಿ ಬಂಡವಾಳ ಹೂಡಿಕೆಗಳನ್ನು ಕಂಡು ಎಸಿಬಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ತಿಂಗಳಿಗೆ 45 ಸಾವಿರ ರು. ವೇತನ ಪಡೆಯುತ್ತಿರುವ ರಾವ್, 40ಕ್ಕೂ ಹೆಚ್ಚುಕಡೆ ಅಕ್ರಮ ಆಸ್ತಿ ಸಂಪಾದಿಸಿರುವುದು ಬಯಲಾಗಿದೆ. ಶುಕ್ರವಾರ ನಡೆಸಿದ ದಾಳಿಯ ವೇಳೆ 10 ಲಕ್ಷ ರು. ನಗದು, 1.95 ಲಕ್ಷ ರು. ಮೌಲ್ಯದ ಅಮೆರಿಕನ್ ಡಾಲರ್, ಬ್ಯಾಂಕುಗಳಲ್ಲಿ ಇಟ್ಟಿದ್ದ 25 ಲಕ್ಷ ರು., 15 ಲಕ್ಷ ರು. ಬೆಲೆ ಬಾಳುವ ಮನೆಬಳಕೆ ಸಾಮಗ್ರಿಗಳು, 1.1 ಕೆ.ಜಿ. ಚಿನ್ನ, 9 ಕೆ.ಜಿ. ಬೆಳ್ಳಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಉತ್ತರಪ್ರದೇಶದ ನೋಯ್ಡಾದ ಎಂಜಿನಿಯರ್ ಯಾದವ್‌ಸಿಂಗ್ ಮನೆ ಮೇಲೆ ದಾಳಿ ನಡೆದಾಗ 900 ಕೋಟಿ ರು.ಗೂ ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗಿ, ಅವರನ್ನು ಅಮಾನತು ಮಾಡಿತ್ತು. ಕೆಲ ಸಮಯದ ಬಳಿಕ ಅಖಿಲೇಶ್ ಸರ್ಕಾರ, ಯಾದವ್ ಅವರನ್ನು ಹಿಂದಿನ ಹುದ್ದೆಗೇ ಮರು ನೇಮಕ ಮಾಡಿತ್ತು.