ಬೆಂಗಳೂರು[ಅ.05]: ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಿರುವ ಆರೋಪದ ಮೇಲೆ ಅಮಾನತುಗೊಂಡಿರುವ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ ಸೇರಿದಂತೆ ಮೂವರು ಸರ್ಕಾರಿ ನೌಕರರಿಗೆ ಸೇರಿದ 16 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಕೋಟ್ಯಂತರ ರು. ಅಸ್ತಿ ಪತ್ತೆಯಾಗಿದೆ.

ಅಮಾನತುಗೊಂಡಿರುವ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೆ.ಹನುಮಂತಪ್ಪ ಮತ್ತು ಬೀದರ್‌ ಜಿಲ್ಲೆ ಹುಮನಾಬಾದ್‌ ತಾಲೂಕಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದ ಕಿರಿಯ ಎಂಜಿನಿಯರ್‌ ವಿಜಯ ರೆಡ್ಡಿ ಅವರಿಗೆ ಸೇರಿದ 16 ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಪತ್ತೆಯಾದ ಆಸ್ತಿಯ ವಿವರ

1.ಎಸ್‌.ಮೂರ್ತಿ, ಕಾರ್ಯದರ್ಶಿ (ಅಮಾನತಿನಲ್ಲಿದ್ದಾರೆ) ವಿಧಾನಸಭೆ ಸಚಿವಾಲಯ-

ತಮ್ಮ ಮತ್ತು ಕುಟುಂಬಸ್ಥರ ಹೆಸರಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿ ಒಂದು ಮನೆ, ಎಚ್‌ಎಂಟಿ ಕಾಲೋನಿಯಲ್ಲಿ ಮನೆ, ಆರ್‌.ಟಿ.ನಗರದ ಓಂಶಕ್ತಿ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲಾಟ್‌, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ 3 ನಿವೇಶನ, ದೇವನಹಳ್ಳಿಯಲ್ಲಿ 2 ಎಕರೆ ಜಮೀನು, ಕೊಡಗು ಜಿಲ್ಲೆಯ ಕೆ.ನಿಡುಗಣೆ ಗ್ರಾಮದಲ್ಲಿ 11.85 ಎಕರೆ ಕಾಫಿ ತೋಟ. 460 ಗ್ರಾಂ ಚಿನ್ನ, 3 ಕಾರು, 3 ದ್ವಿಚಕ್ರ ವಾಹನ, 5 ಬ್ಯಾಂಕ್‌ ಖಾತೆಗಳು, 1 ಲಾಕರ್‌ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

2. ಕೆ.ಹನುಮಂತಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್‌, ಹೂವಿನ ಹಡಗಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗ-

ತಮ್ಮ ಮತ್ತು ಕುಟುಂಬಸ್ಥರ ಹೆಸರಲ್ಲಿ ಹೊಸಪೇಟೆಯ ಎಂ.ಜೆ.ನಗರದಲ್ಲಿ 2 ವಾಸದ ಮನೆ ಮತ್ತು ಹೂವಿನ ಹಡಗಲಿಯಲ್ಲಿ 1 ಮನೆ, ನಾಗತಿ ಬಸಾಪುರದಲ್ಲಿ 1 ಶಾಲಾ ಕಟ್ಟಡ, 3 ನಿವೇಶನ ಮತ್ತು 12.37 ಎಕರೆ ಜಮೀನು, 330 ಗ್ರಾಂ ಚಿನ್ನ, 277 ಗ್ರಾಂ ಬೆಳ್ಳಿ, 1 ಕಾರು, 2 ಶಾಲಾ ಬಸ್‌ಗಳು, 3 ದ್ವಿಚಕ್ರ ವಾಹನಗಳು, 43 ಲಕ್ಷ ರು. ಠೇವಣಿ, 23.97 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ಕಂಡು ಬಂದಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

3. ವಿಜಯ ರೆಡ್ಡಿ, ಕಿರಿಯ ಅಭಿಯಂತರ, ಹುಮನಾಬಾದ್‌ ತಾಲೂಕಿನ ಪಮಚಾಯತ್‌ ರಾಜ್‌ ಎಂಜಿನಿಯರಿಂಗ್‌, ಬೀದರ್‌-

ಹುಮನಾಬಾದ್‌ ನಗರದಲ್ಲಿ 1 ಮನೆ, 1 ಅಂಗಡಿ, 4 ನಿವೇಶನಗಳು, 29.09 ಗುಂಟೆ ಕೃಷಿ ಜಮೀನು, 981 ಗ್ರಾಂ ಚಿನ್ನ, 717 ಗ್ರಾಂ ಬೆಳ್ಳಿ, 1 ಕಾರು, 2 ದ್ವಿ ಚಕ್ರ ವಾಹನ, 1.27 ಲಕ್ಷ ರು., 30 ಸಾವಿರ ರು. ಠೇವಣಿ, 31.55 ಲಕ್ಷ ರು. ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.