ತುಮಕೂರು (ಜ. 24): ತ್ರಿವಿಧ ದಾಸೋಹಿ, ನಿಷ್ಕಾಮ ಯೋಗಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಧರೆಯಲ್ಲಿ ಅಳಿಸಲಾಗದ ಇತಿಹಾಸವನ್ನೇ ಬರೆದು ಶಿವನೆಡೆಗೆ ತೆರಳಿದ್ದಾರೆ ಸಿದ್ದಗಂಗಾ ಶ್ರೀಗಳು. 

ಸಿದ್ದಗಂಗಾ ಶ್ರೀಗಳ ಯಾವಾಗಲೂ ಇರುತ್ತಿದ್ದ ಶ್ವಾನ ಭೈರ ಶ್ರೀಗಳ ನಿಧನದ ನಂತರ ಕಾಣಿಸುತ್ತಿಲ್ಲ ಎನ್ನಲಾಗಿದೆ. ಒಮ್ಮೆ ಶ್ರೀಗಳು ಯಾವುದೋ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ನಾಯಿಮರಿಯೊಂದು ಅಪಘಾತಕ್ಕೀಡಾಗಿ ಒದ್ದಾಡುತ್ತಿತ್ತು. ಅದನ್ನು ಮಠಕ್ಕೆ ತಂದು ಆರೈಕೆ ಮಾಡಿದರು. ನಂತರ ಬೈರ ಮಠದಲ್ಲಿ ಶ್ರೀಗಳನ್ನೇ ನೆರಳಾಗಿ ಹಿಂಬಾಲಿಸುತ್ತಿತ್ತು ಎನ್ನಲಾಗಿದೆ. 

ಶ್ರೀಗಳಿಗೂ ಭೈರನೆಂದರೆ ಅಪಾರ ಪ್ರೀತಿ. ಅವರು ಆಸ್ಪತ್ರೆಯಿಂದ ಮಠಕ್ಕೆ ತಂದಾಗ ದುಃಖದಿಂದ ಅನ್ನ ನೀರು ಬಿಟ್ಟಿತ್ತು. ಶ್ರೀಗಳು ಲಿಂಗೈಕ್ಯರಾದ ನಂತರ ಭೈರನೂ ಕೂಡಾ ನಾಪತ್ತೆಯಾಗಿ ಬಿಟ್ಟ, ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. 

ಆದರೆ, ಪೋಸ್ಟಿನಲ್ಲಿರುವ ಭೈರ ಸುಮಾರು 25-30 ವರ್ಷಗಳ ಹಿಂದಿನ ಫೋಟೋದಲ್ಲಿರುವಂತೆ ಕಾಣಿಸುತ್ತಿದೆ. ನಾಯಿಯ ಆಯಸ್ಸು ಗರಿಷ್ಠ 20 ವರ್ಷ. ಹಾಗಾಗಿ ಈ ಪೋಸ್ಟಿನಲ್ಲಿ ಹೇಳಿದಂತೆ ಗುರುಗಳು ಲಿಂಗೈಕ್ಯವಾದ ಕೂಡಲೇ, ಈ ಶ್ವಾನವೂ ಕಾಣಿಸುತ್ತಿಲ್ಲ ಎಂಬ  ಬಗ್ಗೆ ಹಲವು ಅನುಮಾನಗಳಿವೆ. ಆದರೆ, ಇಂಥದ್ದೊಂದು ಶ್ವಾನ ಪ್ರೀತಿ ಗುರುಗಳಿಗೆ ಇತ್ತು. ಏನೇ ಆದರೂ ನಡೆದಾಡುವ ದೇವರಿಗೆ ಪ್ರಾಣಿ, ಪಕ್ಷಿಗಳು, ಪ್ರಕೃತಿ ಹಾಗೂ ಭೂಮಿಯೊಂದಿಗೆ ವಿಶೇಷ ಪ್ರೀತಿ, ಗೌರವಗಳಿದ್ದು, ಎಲ್ಲವನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು.

ವಾಸ್ತವವೇನು?

ಇನ್ನು ಲಭ್ಯವಾದ ಮಾಹಿತಿ ಅನ್ವಯ ಕೆಲ ವರ್ಷಗಳ ಹಿಂದೆ ಶ್ರೀಗಳ ಮುದ್ದಿನ ನಾಯಿಗೆ ಅನಾರೋಗ್ಯ ಬಾಧಿಸಿತ್ತು. ಈ ನಾಯಿಯನ್ನು ಬಹಳಷ್ಟು ಇಷ್ಟ ಪಡುತ್ತಿದ್ದ ಶ್ರೀಗಳು ಇದರ ಚಿಕಿತ್ಸೆಗಾಗಿ ಬೆಂಗಳೂರಿಗೂ ಕರೆ ತಂದಿದ್ದರೆನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 'ಭೈರ' ಶ್ರೀಗಳ ಮಡಿಲಲ್ಲೇ ಕೊನೆಯುಸಿರೆಳೆದಿದ್ದ. 

- ಫೋಟೋ ಕೃಪೆ: ಫೇಸ್‌ಬುಕ್