ಗರ್ಭಪಾತ ಮಾಡೋದು ಕಾನೂನು ಬಾಹಿರ ಎಂದು ಸರ್ಕಾರ ಎಷ್ಟೇ ಬೊಬ್ಬೆ ಹೊಡೆದರೂ ಕೆಲ ವೈದ್ಯರು ಮಾತ್ರ ಹಣದ ಆಸೆಗಾಗಿ ಅಕ್ರಮವಾಗಿ ಗರ್ಭಪಾತ ಮಾಡುವುದನ್ನು ದಂಧೆಯಾಗಿಸಿಕೊಂಡಿದ್ದಾರೆ. ಅದು ಹೇಳಿ ಕೇಳಿ ಗಡಿ ಜಿಲ್ಲೆಯಲ್ಲಿ ಕೆಲ ಆಸ್ಪತ್ರೆಗಳು ಗರ್ಭಪಾತ ಮಾಡುವುದನ್ನೇ ಬಿಸಿನೆಸ್ ಮಾಡಿಕೊಂಡಿವೆ. ನೆರೆ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರದ ರೋಗಿಗಳೇ ಇವರಿಗೆ ಬಂಡವಾಳ. ಈ ಬಗ್ಗೆ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ.
ಬೀದರ್(ಅ.08): ಅಂಕಿತಾ ಮತ್ತು ಯಶವಂತ ಕುಲಕರ್ಣಿ, ಮಹಾರಾಷ್ಟ್ರದ ಲಾತೂರು ಜಿಲ್ಲೆಯವರು. ಅಕ್ಟೋಬರ್ 1ರಂದು ಬೀದರ್ ನಗರದ ಪ್ರತಿಷ್ಠಿತ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆ ಡಾ.ಸರಿತಾ ಭದಭಧೆ ಎಂಬುವವರ ಬಳಿ ಅಂಕಿತಾಳಿಗೆ ಗರ್ಭಪಾತ ಮಾಡುವಂತೆ ಕೇಳಿಕೊಳ್ತಾರೆ. ಆದರೆ, ಗರ್ಭಪಾತ ಮಾಡುವುದು ಕಾನೂನಿಗೆ ವಿರೋಧ ಎಂದು ಅರಿತಿದ್ದರೂ ಡಾ.ಸವಿತಾ ಮಾತ್ರ ಗರ್ಭಪಾತ ಮಾಡಲು ಮುಂದಾಗಿದ್ದಾರೆ. ಅಲ್ಲದೇ, ಇದಕ್ಕಾಗಿ 20 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ
ಇತ್ತ ಅಂಕಿತಾಳ ಗಂಡ ಎಂದು ಹೇಳಿಕೊಂಡು ಬಂದಿದ್ದ ಯಶವಂತ 16 ಸಾವಿರ ಹಣ ಕೊಟ್ಟಿದ್ದ, ಆದ್ರೆ ವೈದ್ಯರು ಮಾತ್ರ ಪೂರ್ತಿ ಹಣ ನೀಡಿದ್ರೆ ಮಾತ್ರ ಅಂಕಿತಾಳನ್ನ ಬಿಡುವುದಾಗಿ ಹೇಳಿ ಅಬಾರ್ಷನ್ ಆದ ಬಳಿಕ 3 ದಿನ ಕೋಣೆಯಲ್ಲೇ ಕೂಡಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗರ್ಭಪಾತ ಮಾಡುವುದು ಅಪರಾಧ ಅಂತ ಗೊತ್ತಿದ್ದರೂ ಕೆಲ ವೈದ್ಯರು ಮಾತ್ರ ಇದನ್ನ ತಮ್ಮ ಬಿಸಿನೆಸ್ ಆಗಿ ಮಾಡಿಕೊಂಡಿದ್ದಾರೆ. ಅದರಲ್ಲೂ ಗಡಿ ಜಿಲ್ಲೆ ಬೀದರ್ ನಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸರ್ಕಾರ, ಆರೋಗ್ಯ ಇಲಾಖೆ ಸಚಿವರು ಎಚ್ಚೆತ್ತು ಇಂತಹ ಅಮಾನವೀಯ ಕೃತ್ಯಗಳಿಗೆ ಬ್ರೇಕ್ ಹಾಕಬೇಕಿದೆ.
