ಮಂಡ್ಯ (ಮೇ. 14): ಅದೇನೋ ಹೊಸ ಸಿನಿಮಾ ಮಾಡುತ್ತಾರೆಂದು ಕೇಳಲ್ಪಟ್ಟೆ. ಅವರಿಗೆ ಗುಡ್‌ ಲಕ್‌ ಎಂದು ಹೇಳುವ ಮೂಲಕ ಮಾಜಿ ಸಚಿವ ದಿವಂಗತ ಅಂಬರೀಷ್‌ ಪುತ್ರ ಅಭಿಷೇಕ್‌ ಅವರು ನಿಖಿಲ್‌ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ.

ಅಭಿಮಾನಿಯೊಬ್ಬರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್‌, ಅದೇನೋ ಹೊಸ ಸಿನಿಮಾ ಮಾಡ್ತಾರಂತೆ. ನಿಖಿಲ್‌ ಎಲ್ಲಿದ್ದೀಯಪ್ಪಾ ಸಿನಿಮಾಗೆ ನಿಖಿಲ್‌ ತಾವೇ ಹೀರೋ ಆಗುತ್ತೇನೆ ಎಂದು ಹೇಳಿದ್ದಾರೆ. ಗುಡ್‌ ಲಕ್‌ ಎಂದು ಹಾಸ್ಯವಾಗಿ ಹೇಳಿದರು.

ರಾಜಕೀಯ ಎಂದರೆ ನಾನು ಬರ್ತೇನೆ, ನಾನೇ ಆಯ್ಕೆಯಾಗ್ತೇನೆ. ನಮ್ಮಪ್ಪ ಬಂದು ಗೆಲ್ಲಿಸ್ತಾರೆ ಅನ್ನಬಾರದು. ಜನರು ನಮ್ಮನ್ನ ಕರ್ಕೊಂಡು ಬಂದು ಗೆಲ್ಲಿಸಬೇಕು. ನಮ್ಮಪ್ಪ ನನ್ನ ಮಗನನ್ನು ಬೆಳೆಸಿ ಎಂದು ಯಾವತ್ತೂ ಜನರ ಬಳಿ ಕೇಳಿಕೊಳ್ಳಲಿಲ್ಲ. ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು, ಯಾರನ್ನು ನಾವು ಆಯ್ಕೆ ಮಾಡಬೇಕು ಅನ್ನೋದನ್ನ ಜನರು ತೀರ್ಮಾನ ಮಾಡಬೇಕು ಎಂದು ಹೇಳಿದರು.

ಈ ಚುನಾವಣೆಯ ಫಲಿತಾಂಶ ಮತ ಯಂತ್ರದಲ್ಲಿ ಅಡಗಿದೆ. ಯಾವ ಸರ್ವೇ ಮಾಡಿಸಿದರೂ, ಎಷ್ಟೇ ದೇವಾಲಯಗಳನ್ನು ಸುತ್ತಿದರೂ ಫಲಿತಾಂಶ ಬದಲಾವಣೆಯಾಗಲ್ಲ. ಫಲಿತಾಂಶ ಈಗಾಗಲೇ ಮತಯಂತ್ರದಲ್ಲಿ ಬಚ್ಚಿಟ್ಟುಕೊಂಡಿದೆ. ಅದು, ಮೇ 23ಕ್ಕೆ ಹೊರಬೀಳಲಿದೆ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೆ ಟಾಂಗ್‌ ನೀಡಿದರು.