‘ನ್ಯಾಯ್‌’ ಯೋಜನೆ ಹಿಂದಿನ ಮಿದುಳು ನಾನಲ್ಲ: ಬ್ಯಾನರ್ಜಿ| ಅದು ಉತ್ತಮ ರೂಪದ ಯೋಜನೆ ಆಗಿರಲಿಲ್ಲ

ನವದೆಹಲಿ[ಅ.20]: ದೇಶದ ಬಡವರಿಗೆ ವರ್ಷಕ್ಕೆ 72 ಸಾವಿರ ರು. ನೆರವು ನೀಡುವ ಸಂಬಂಧ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ‘ನ್ಯಾಯ್‌’ ಯೋಜನೆಯ ಹಿಂದಿನ ಮಿದುಳು ತಾವು ಎಂಬ ಆರೋಪಗಳನ್ನು ನೊಬೆಲ್‌ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ತಳ್ಳಿಹಾಕಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ಶನಿವಾರ ಸಂದರ್ಶನ ನೀಡಿದ ಬ್ಯಾನರ್ಜಿ, ‘ನ್ಯಾಯ್‌ ಯೋಜನೆಯನ್ನು ರೂಪಿಸಿ ಅದರ ಘೋಷಣೆಯ ಬಗ್ಗೆ ನನ್ನಿಂದ ಕಾಂಗ್ರೆಸ್‌ ಪಕ್ಷ ಸಲಹೆ ಕೇಳಿತ್ತು. ಆಗ ಕೆಲವು ಮಾಹಿತಿಗಳನ್ನು ನಾನು ನೀಡಿದ್ದೆನಷ್ಟೇ. ಈ ಯೋಜನೆಯನ್ನು ರೂಪಿಸಿದ್ದು ನಾನಲ್ಲ. ಅದೊಂದು ಉತ್ತಮ ರೂಪದ ಯೋಜನೆ ಆಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನ ನ್ಯಾಯ್‌ ಯೋಜನೆಯನ್ನು ಲೋಕಸಭೆ ಚುನಾವಣೆ ವೇಳೆ ಜನರು ತಿರಸ್ಕರಿಸಿದ್ದರು. ಅಂಥ ಯೋಜನೆಯ ಜನಕಗೆ ಈಗ ನೊಬೆಲ್‌ ಬಂದಿದೆ’ ಎಂದು ಕೆಲ ಬಿಜೆಪಿ ನಾಯಕರು ಕುಹಕವಾಡಿದ್ದರು.

‘ನ್ಯಾಯ್‌ ಯೋಜನೆ ಸಿದ್ಧಪಡಿಸಿ, ಅದರ ಜಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ ಕೆಲವು ಸಲಹೆ ಕೇಳಿತ್ತು. ಆದರೆ ಈ ಯೋಜನೆ ಜಾರಿಗೆ ಹಣ ಹೊಂದಿಸಬೇಕಾದರೆ, ಸಬ್ಸಿಡಿಯಂತಹ ಹಲವು ಕೊಡುಗೆಗಳನ್ನು ನಿಲ್ಲಿಸಬೇಕಾಗುತ್ತದೆ’ ಎಂಬ ಅಭಿಪ್ರಾಯ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ ‘ಯಾವುದೇ ಸಬ್ಸಿಡಿ ರದ್ದುಪಡಿಸುವುದಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು.