ಆಧಾರ್‌ ಡೀಲಿಂಕ್‌ : 15 ದಿನದಲ್ಲಿ ವರದಿ ನೀಡಲು ಟೆಲಿಕಾಂ ಸಂಸ್ಥೆಗಳಿಗೆ ಆದೇಶ | ಏರ್‌ಟೆಲ್‌, ರಿಲಯನ್ಸ್‌ ಜಿಯೊ, ವೊಡಾಫೋನ್‌, ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಈಗಾಗಲೇ ಸುತ್ತೋಲೆ ಜಾರಿ  

ನವದೆಹಲಿ (ಅ. 02): ಗ್ರಾಹಕರ ದೃಢೀಕರಣಕ್ಕೆ ಆಧಾರ್‌ ಸಂಖ್ಯೆ ಬಳಸುವುದನ್ನು ನಿಲ್ಲಿಸುವ ಕುರಿತು ಮತ್ತು ಈಗಾಗಲೇ ಮಾಡಿರುವ ಲಿಂಕ್‌ ಅನ್ನು ಡೀಲಿಂಕ್‌ ಮಾಡುವ ಕುರಿತು 15 ದಿನಗಳೊಳಗೆ ವರದಿ ನೀಡಿ ಎಂದು ಟೆಲಿಕಾಂ ಕಂಪೆನಿಗಳಿಗೆ, ವಿಶಿಷ್ಟಗುರುತಿನ ಪ್ರಾಧಿಕಾರ ಸೋಮವಾರ ನಿರ್ದೇಶಿಸಿದೆ.

ಏರ್‌ಟೆಲ್‌, ರಿಲಯನ್ಸ್‌ ಜಿಯೊ, ವೊಡಾಫೋನ್‌, ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಈಗಾಗಲೇ ಈ ಸಂಬಂಧ ಸುತ್ತೋಲೆ ಜಾರಿಗೊಳಿಸಲಾಗಿದೆ. 12 ಸಂಖ್ಯೆಗಳ ಬಯೋಮೆಟ್ರಿಕ್‌ ಐಡಿ ಆಧಾರಿತ ಇಕೆವೈಸಿ ಬಳಕೆಗೆ ಖಾಸಗಿ ಕಂಪೆನಿಗಳಿಗೆ ಅನುಮತಿ ನೀಡುವ ಆಧಾರ್‌ ಕಾಯ್ದೆಯ ಕಲಂ 57 ಅನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ರದ್ದುಗೊಳಿಸಿ ಆದೇಶ ಜಾರಿಗೊಳಿಸಿದೆ.

ಹೀಗಾಗಿ ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಈ ಹಿಂದಿನ ರೀತಿಯಲ್ಲಿ ಅರ್ಜಿ ನಮೂನೆ ಬಳಸಿ ಮಾಹಿತಿ ಪಡೆಯುವ, ಫೋಟೋ ಪಡೆದುಕೊಳ್ಳುವ, ಗ್ರಾಹಕರಿಗೆ ಕಾಲ್‌ಸೆಂಟರ್‌ ಮೂಲಕ ಕರೆ ಮಾಡಿ ಖಚಿತಪಡಿಸಿಕೊಳ್ಳುವ ಹಳೆಯ ಪದ್ಧತಿ ಜಾರಿ ಮಾಡುವುದು ಅನಿವಾರ್ಯ ಎನ್ನಿಸಲಿದೆ.