ದೇಶಾದ್ಯಂತ ಸಾರ್ವಜನಿಕರ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಭೀತಿಯ ನಡುವೆಯೇ, ‘ಪೇಟಿಎಂ ಮೂಲಕ 500 ರು. ಕೊಟ್ಟರೆ ಸಾಕು. 10 ನಿಮಿಷದಲ್ಲಿ ಸುಮಾರು 100 ಕೋಟಿ ಆಧಾರ್ ಕಾರ್ಡುದಾರರ ವಿವರಗಳು ಯಾವುದೇ ಅಡಚಣೆಯಿಲ್ಲದೇ ಲಭ್ಯವಾಗುತ್ತಿವೆ’ ಎಂಬ ಪತ್ರಿಕಾ ವರದಿಯೊಂದು ಆಧಾರ್ ಕಾರ್ಡುದಾರರನ್ನು ಆತಂಕಕ್ಕೆ ತಳ್ಳಿದ ಪ್ರಸಂಗ ಗುರುವಾರ ನಡೆದಿದೆ.
ನವದೆಹಲಿ(ಜ.05): ದೇಶಾದ್ಯಂತ ಸಾರ್ವಜನಿಕರ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಭೀತಿಯ ನಡುವೆಯೇ, ‘ಪೇಟಿಎಂ ಮೂಲಕ 500 ರು. ಕೊಟ್ಟರೆ ಸಾಕು. 10 ನಿಮಿಷದಲ್ಲಿ ಸುಮಾರು 100 ಕೋಟಿ ಆಧಾರ್ ಕಾರ್ಡುದಾರರ ವಿವರಗಳು ಯಾವುದೇ ಅಡಚಣೆಯಿಲ್ಲದೇ ಲಭ್ಯವಾಗುತ್ತಿವೆ’ ಎಂಬ ಪತ್ರಿಕಾ ವರದಿಯೊಂದು ಆಧಾರ್ ಕಾರ್ಡುದಾರರನ್ನು ಆತಂಕಕ್ಕೆ ತಳ್ಳಿದ ಪ್ರಸಂಗ ಗುರುವಾರ ನಡೆದಿದೆ.
ಈ ವರದಿಯ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಆಧಾರ್ ಪ್ರಾಧಿಕಾರ), ‘ಇದೊಂದು ಸುಳ್ಳು ವರದಿ. ಆಧಾರ್’ನಲ್ಲಿ ಸಂಗ್ರಹಿಸಲಾಗಿರುವ ಎಲ್ಲ ಮಾಹಿತಿಗಳು ಸುರಕ್ಷಿತವಾಗಿದೆ. ಯಾವುದೇ ರೀತಿಯ ಆಧಾರ್ ದುರುಪಯೋಗ ಯತ್ನಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ’ ಎಂದಿದೆ.
ಏನಿದು ಗೊಂದಲ?: ‘ಪೇಟಿಎಂ ಮೂಲಕ 500 ರು. ನೀಡಿದರೆ ಯಾವುದೇ ಅಡಚಣೆಯಿಲ್ಲದೆ, 10 ನಿಮಿಷದಲ್ಲಿ ಶತಕೋಟಿ ಆಧಾರ್ ಮಾಹಿತಿ ಲಭ್ಯವಾಗುತ್ತದೆ’ ಎಂದು ವಾಟ್ಸಪ್‌ನಲ್ಲಿ ಅನಾಮಿಕ ಸಂದೇಶವೊಂದು ಬಂದಿತ್ತು. ಇದರ ಜಾಡನ್ನು ಹಿಡಿದ ನಮ್ಮ ವರದಿಗಾರರು ಪೇಟಿಎಂ ಮೂಲಕ 500 ರು. ಪಾವತಿಸಿದರು. ಇದಾದ ಹತ್ತೇ ನಿಮಿಷದಲ್ಲಿ ಸಂಬಂಧಿಸಿದ ಏಜೆಂಟ್ ಒಬ್ಬ ವರದಿಗಾರರಿಗೆ ವೆಬ್‌ಸೈಟ್ ವಿಳಾಸ, ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ.
ಅದರಲ್ಲಿ ನಮಗೆ ಬೇಕಾದ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಆ ಖಾತೆದಾರರ ಸಂಪೂರ್ಣ ಮಾಹಿತಿಗಳು, ಫೋಟೋ, ವಿಳಾಸ, ದೂರವಾಣಿ ಸಂಖ್ಯೆ, ಜನ್ಮ ದಿನಾಂಕ, ಇ-ಮೇಲ್ ವಿಳಾಸ, ಪಿನ್ ಸಂಖ್ಯೆ ಇತ್ಯಾದಿಗಳು ಲಭ್ಯವಾದವು’ ಎಂದು ಎಂದು ಚಂಡೀಗಢ ಮೂಲದ ‘ದ ಟ್ರಿಬ್ಯೂನ್’ ಪತ್ರಿಕೆ ಗುರುವಾರ ವರದಿ ಮಾಡಿತ್ತು. ‘ಇದಲ್ಲದೆ ಇನ್ನೂ 300 ರು. ಹೆಚ್ಚಿಗೆ ನೀಡಿದಾಗ ಆ ಏಜೆಂಟ್ ಇನ್ನೊಂದು ಸಾಫ್ಟ್‌ವೇರ್ ನೀಡಿದ.
ಆ ಸಾಫ್ಟ್‌ವೇರ್ ಮೂಲಕ ನಮಗೆ ಬೇಕಾದ ಆಧಾರ್ ಸಂಖ್ಯೆಗಳನ್ನು ನಮೂದು ಮಾಡಿದರೆ, ಆಧಾರ್ ಕಾರ್ಡನ್ನು ಮುದ್ರಿಸಿಕೊಳ್ಳಬಹು ದಾಗಿದೆ’ ಎಂದು ವರದಿ ಹೇಳಿತ್ತು. ವರದಿ ಸಂಚಲನ ಮೂಡಿಸುತ್ತಿದ್ದಂತೆಯೇ ಕೂಡಲೇ ಸ್ಪಷ್ಟನೆ ನೀಡಿರುವ ಯುಐಡಿಎಐ, ‘ಅಂಥ ಯಾವುದೇ ಘಟನೆಗಳು ನಡೆದಿಲ್ಲ. ಆಧಾರ್ ಮಾಹಿತಿ ಸೋರಿಕೆ ವರದಿಗಳು ಸತ್ಯಕ್ಕೆ ದೂರ. ಆಧಾರ್ ನಲ್ಲಿ ಸಂಗ್ರಹವಾಗಿರುವ ಬಯೋ ಮೆಟ್ರಿಕ್, ಮಾಹಿತಿಗಳು ಸುರಕ್ಷಿತವಾಗಿವೆ ಎಂದು ಹೇಳಿದೆ.
