ಇನ್ನು ಮುಂದೆ ಹಿರಿಯ ನಾಗರಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್ ಟಿಸಿ) ಬಸ್‌ಗಳಲ್ಲಿ ಮತದಾನದ ಗುರುತಿನ ಚೀಟಿ, ಆಧಾರ್ ಇನ್ನಿತರೆ ಗುರುತಿನ ಚೀಟಿ ತೋರಿಸಿ ಟಿಕೆಟ್ ರಿಯಾಯಿತಿ ಸೌಲಭ್ಯ ಪಡೆಯಬಹುದು.
ಬೆಂಗಳೂರು (ಜ.23): ಇನ್ನು ಮುಂದೆ ಹಿರಿಯ ನಾಗರಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ ಟಿಸಿ) ಬಸ್ಗಳಲ್ಲಿ ಮತದಾನದ ಗುರುತಿನ ಚೀಟಿ, ಆಧಾರ್ ಇನ್ನಿತರೆ ಗುರುತಿನ ಚೀಟಿ ತೋರಿಸಿ ಟಿಕೆಟ್ ರಿಯಾಯಿತಿ ಸೌಲಭ್ಯ ಪಡೆಯಬಹುದು.
ನಿಗಮದ ಸಾಮಾನ್ಯ, ವೇಗದೂತ, ಅರೆ ಸುವಿಹಾರಿ ಮತ್ತು ರಾಜಹಂಸ ಬಸ್ಗಳಲ್ಲಿ ಪ್ರಯಾಣಿಸುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಇಷ್ಟು ದಿನ ರಿಯಾಯಿತಿ ಪಡೆಯಲು ನಿಗಮ ನೀಡುತ್ತಿದ್ದ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಇನ್ನು ಮುಂದೆ ವಿತರಿಸುವುದಿಲ್ಲ. ಹಾಗಾಗಿ ಹಿರಿಯ ನಾಗರಿಕರು ಇನ್ನು ಮುಂದೆ ವಯಸ್ಸಿನ ದೃಢೀಕರಣದ ಹಲವು ಬಗೆಯ ಗುರುತಿನ ಚೀಟಿಗಳಲ್ಲಿ ಯಾವುದಾದರೊಂದು ಮೂಲ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ರಿಯಾಯಿತಿ ಪಡೆಯಬಹುದು.
ವಾಸಸ್ಥಳ ಹಾಗೂ ಹುಟ್ಟಿದ ದಿನಾಂಕವಿರುವ ಪಾಸ್ಪೋರ್ಟ್, ಮತದಾನ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ನರೇಗಾ ಗುರುತಿನ ಚೀಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಘಟಕಗಳಿಂದ ನೀಡಿರುವ ಗುರುತಿನ ಚೀಟಿಗಳಲ್ಲಿ ಪೈಕಿ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ತೋರಿಸಿ ಟಿಕೆಟ್ ರಿಯಾಯಿತಿ ಪಡೆಯಬಹುದು. ಈಗಾಗಲೇ ನಿಗಮದಿಂದ ನೀಡಿರುವ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನೂ ಮಾನ್ಯ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
