ವಾಷಿಂಗ್ಟನ್[ಜ.06]: ಅಮೆರಿಕಾದ ಎರಿಜೋನಾದಲ್ಲಿ ಬೆಚ್ಚಿ ಬಿಳಿಸುವ ಘಟನೆಯೊಂದು ನಡೆದಿದೆ. 14 ವರ್ಷಗಳಿಂದ ಕೋಮಾದಲ್ಲಿದ್ದ ಮಹಿಳೆಯೊಬ್ಬಳು ಗರ್ಭಿಣಿಯಾಗಿ, ಮಗುವಿಗೆ ಜನ್ಮ ಕೊಟ್ಟಿರುವುದು ವೈದ್ಯರನ್ನೂ ಬೆವರುವಂತೆ ಮಾಡಿದೆ. ಸ್ಥಳೀಯ ಮಾಧ್ಯಮಗಳ ಅನ್ವಯ ಈ ಮಹಿಳೆ ಇಲ್ಲಿ ಆಸ್ಪತ್ರೆಯೊಂದರಲ್ಲಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆನ್ನಲಾಗಿದೆ.

ಮಹಿಳೆಗೆ 2018ರ ಡಿಸೆಂಬರ್ 29ರಂದು ಹೆರಿಗೆ ಆಗಿದ್ದು, ಮಗು ಆರೋಗ್ಯವಂತವಾಗಿದೆ. ಆದರೆ ಕೋಮಾದಲ್ಲಿದ್ದ ಮಹಿಳೆ, ಗರ್ಭಿಣಿಯಾದ ವಿಚಾರ ಯಾವೊಬ್ಬ ವೈದ್ಯ ಸಿಬ್ಬಂದಿಗೂ ತಿಳಿಯಲಿಲ್ಲ ಎಂಬುವುದೇ ಅಚ್ಚರಿ ಮೂಡಿಸುವಂತಿದೆ. ಸದ್ಯ 14 ವರ್ಷಗಳಿಂದ ಓಡಾಡಲು ಸಾಧ್ಯವಾಗದೇ ಕೋಮಾದಲ್ಲಿದ್ದ ಮಹಿಳೆ ಇದ್ದಕ್ಕಿದ್ದಂತೆ ಗರ್ಭಿಣಿ ಆಗಿದ್ದು ಹೇಗೆ? ಮಗುವಿನ ತಂದೆ ಯಾರು? ಎಂಬ ತನಿಖೆ ನಡೆಯುತ್ತಿದೆ.

ಈ ಪ್ರಕರಣದ ಮಾಹಿತಿ ಪೊಲೀಸರಿಗೆ ತಲುಪಿದ್ದು, ವಿಚಾರ ತಿಳಿದ ಪೊಲೀಸರೂ ಕಂಗಾಲಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸದ್ಯ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದು, ಮಹಿಳೆಯ ಆರೈಕೆ ಮಾಡುತ್ತಿದ್ದ ವೈದ್ಯ ಸಿಬ್ಬಂದಿ ಈ ದುಷ್ಕೃತ್ಯ ನಡೆಸಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

14 ವರ್ಷಗಳ ಹಿಂದೆ ಮಹಿಳೆಯ ತಂದೆ ತಾಯಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಶಾಕ್ ತಡೆಯಲಾಗದೆ ಮಹಿಳೆ ಕೋಮಾಗೆ ಜಾರಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಮಹಿಳೆಗೆ ಸಾಮಾನ್ಯವಾಗಿ ಸಿಬ್ಬಂದಿಗಳ ಸಹಾಯ ಬೇಕಾಗುತ್ತಿತ್ತು. ಹೀಗಾಗಿ ಅವರಿದ್ದ ಕೋಣೆಯೊಳಗೆ ಸಿಬ್ಬಂದಿಗಳು ಪ್ರವೇಶಿಸಲು ಯಾವುದೇ ಅಡೆ ತಡೆಗಳಿರಲಿಲ್ಲ. ಆದರೀಗ ಮಹಿಳೆಗೆ ಹೆರಿಗೆಯಾದ ಬಳಿಕ ಕೋಣೆಯೊಳಗೆ ಪ್ರವೇಶಿಸಲು ನಿಯಮಗಳನ್ನು ವಿಧಿಸಲಾಗಿದೆ. ಇನ್ನು ಇಷ್ಟು ದೊಡ್ಡ ಪ್ರಮಾದ ನಡೆದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.