ಮದುಮಗಳಿಲ್ಲದೆಯೇ ವಾಸ್ತವ ಮದುವೆಗೂ ಯಾವುದೇ ಕೊರತೆ ಇಲ್ಲದಂತೆ 2 ಲಕ್ಷ ಖರ್ಚು ಮಾಡಿ ಮದ್ವೆ| ಗುಜರಾತ್‌ನಲ್ಲಿ ವಧುವಿಲ್ಲದೆಯೇ ವಿಶೇಷ ಮದ್ವೆ!

ಅಹಮದಾಬಾದ್‌[ಮೇ.14]: ಮಕ್ಕಳ ಯಾವುದೇ ಆಸೆ ಪೂರೈಸಲು ತಂದೆ-ತಾಯಿಗಳು ಸಾಧ್ಯವಿರುವ ಎಲ್ಲಾ ಯತ್ನಗಳನ್ನು ಮಾಡಿಯೇ ತೀರುತ್ತಾರೆ. ಅಂಥ ಒಂದು ನಿದರ್ಶನ ಗುಜರಾತ್‌ನ ಸಬರ್‌ಕಾಂಥ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಇತರ ಯುವಕರಂತೆ ತಾನೂ ಸಹ ವಿವಾಹವಾಗಬೇಕೆಂದುಕೊಂಡಿದ್ದ ಕಲಿಕಾ ದೌರ್ಬಲ್ಯವಿರುವ ಪುತ್ರನ ಆಸೆಯನ್ನು ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

ಇಲ್ಲಿನ ಹಿಮ್ಮತ್‌ ನಗರ ಹತ್ತಿರದ ಚಾಂಪ್ಲಾನರ್‌ ಗ್ರಾಮದ ಅಜಯ್‌ ಬಾರೊಟ್‌(27) ಎಂಬವರೇ ವಧುವಿಲ್ಲದೆ ವಿವಾಹವಾದ ಯುವಕ. ಕಲಿಕಾ ದೌರ್ಬಲ್ಯದ ಮಗನಿಗೆ ಯಾವೊಂದು ಪೋಷಕರು ತಮ್ಮ ಪುತ್ರಿಯರನ್ನು ಕೊಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಕುಟುಂಬಸ್ಥರು, ಮದುಮಗಳಿಲ್ಲದೆಯೇ ವಾಸ್ತವ ಮದುವೆಗೂ ಯಾವುದೇ ಕೊರತೆ ಇಲ್ಲದಂತೆ 2 ಲಕ್ಷ ಖರ್ಚು ಮಾಡಿ ಮದ್ವೆ ಮಾಡಿದ್ದಾರೆ. ಅಲ್ಲದೆ, ಕುದುರೆ ಮೇಲೆ ಮೆರವಣಿಗೆ ಸೇರಿದಂತೆ ಎಲ್ಲ ಸಂಪ್ರದಾಯಗಳನ್ನೂ ಪಾಲಿಸಲಾಗಿದೆ.

ತಮ್ಮ ಊರು ಹಾಗೂ ಇತರ ಗ್ರಾಮಗಳಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಿಗೆ ತೆರಳುತ್ತಿದ್ದ ಯುವಕ, ಮನೆಗೆ ಬಂದಾದ ಬಳಿಕ ತನಗೆ ಯಾವಾಗ ಮದ್ವೆ ಮಾಡುತ್ತೀರಿ ಎಂದು ಪೋಷಕರನ್ನು ಪೀಡಿಸುತ್ತಿದ್ದ. ಅದಕ್ಕಾಗಿಯೇ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.