ಮಕ್ಕಳಿಗೆ ತಂದೆಯೆ ಮೊದಲ ಹಿರೋ ಯಾಕೆ?ಮುಂಬೈನಲ್ಲಿ ಟೀ ಮಾರುವ ವ್ಯಕ್ತಿ ಮಕ್ಕಳಿಗಾಗಿ ಮಾಡಿದ್ದೇನು?ಮ್ಯಾಕ್‌ಡೋನಾಲ್ಡ್ ಗೆ ಮಕ್ಕಳನ್ನು ಕರೆದೊಯ್ದಾಗ ಏನಾಯ್ತು?ಈ ತಂದೆಯ ಪಾಲಿನ ಅತ್ಯಂತ ಮಹತ್ವದ ದಿನ ಯಾವುದು?

ಮುಂಬೈ(ಜೂ.23): ಅಪ್ಪನ ತೋಳಿನಲ್ಲಿ ಸಿಗುವ ಸುರಕ್ಷತಾ ಭಾವ ಇನ್ನೆಲ್ಲಿ ಸಿಗಬೇಕು ಹೇಳಿ. ಅಪ್ಪ ಅಂದ್ರೆ ಹಾಗೆನೆ ಬಡವನೋ, ಶ್ರೀಮಂತನೋ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ ಶಕ್ತಿ ಕೇವಲ ಆತನಿಗೆ ಮಾತ್ರ ಇರೋದು. ಮಕ್ಕಳ ಭವಿಷ್ಯ, ಮಕ್ಕಳ ಬೇಕು ಬೇಡಗಳು ಸದಾ ಆತನ ಗಮನದಲ್ಲಿರುತ್ತವೆ.

ಮಕ್ಕಳ ಬೇಡಿಕೆ ಪೂರೈಕೆಗೆಂದೇ ಆತ ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಾನೆ. ತನ್ನೆಲ್ಲಾ ನೋವನ್ನು ಮಕ್ಕಳ ನಗು ಕಂಡು ಮರೆಯುತ್ತಾನೆ. ಈಗ ಹೇಳಲು ಹೊರಟಿರುವ ತಂದೆಯ ಕತೆಯೂ ಇದೇ ತರಹದ್ದು. ಮುಂಬೈ ಎಂಬ ಮಾಯಾನಗರಿಯಲ್ಲಿ ತಳ್ಳು ಬಂಡಿಯಲ್ಲಿ ಟೀ ಮಾರುವ ತಂದೆಯೋರ್ವ ತನ್ನ ಮಕ್ಕಳನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಂಡು ಹೋದ ಕತೆ ಇದು.

ತಳ್ಳು ಬಂಡಿಯಲ್ಲಿ ಟೀ ಮಾರುವ ವ್ಯಕ್ತಿಯೋರ್ವ ಒಂದು ದಿನ ನಿತ್ಯದ ದುಡಿಮೆಗಿಂತ ಹೆಚ್ಚಿನ ಸಂಪಾದನೆ ಮಾಡಿದ್ದಾನೆ. ಹೀಗಾಗಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಂಡು ಹೋಗಿದ್ದಾನೆ. ತಂದೆ ತಮನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಮಡು ಹೋದ ಬಗ್ಗೆ ಮಕ್ಕಳಿಗೆ ಅದೆಷ್ಟು ಹೆಮ್ಮೆ ಎಂದರೆ ಬರ್ಗರ್ ತಿನ್ನುತ್ತಾ ತಂದೆಯಲ್ಲಿ ಓರ್ವ ಹಿರೋನನ್ನು ಕಂಡಿದ್ದಾರೆ.

ಈ ವಿಷಯವನ್ನು 'ಹ್ಯೂಮನ್ಸ್ ಆಫ್ ಬಾಂಬೆ' ಜೊತೆ ಹಂಚಿಕೊಂಡಿರುವ ಆತ, ತನ್ನ ಕುಟುಂಬವನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಂಡು ಹೋದ ದಿನ ತಮ್ಮ ಜೀವನದ ಅತ್ಯಂತ ಮಹತ್ವದ ದಿನ ಎಂದು ಹೇಳಿದ್ದಾರೆ. ಹ್ಯೂಮನ್ಸ್ ಆಫ್ ಬಾಂಬೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿರುವ ಈ ಪೋಸ್ಟ್‌ಗೆ ಸಾವಿರಾರು ಜನ ಕಮೆಂಟ್ ಮಾಡಿದ್ದು, ತಂದೆಯ ಅಭಿಮಾನವನ್ನು ಕೊಂಡಾಡಿದ್ದಾರೆ.