ಬೆಂಗಳೂರು[ಜು.08]: ಮೈತ್ರಿ ಸರ್ಕಾರ ವಿರುದ್ಧ ಬೇಸರಗೊಂಡು 13 ಶಾಸಕರು ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಯ ವಿಸ್ತೃತವಾದ ವರದಿಯನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಶಾಸಕರು ರಾಜೀನಾಮೆ ನೀಡಿ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಅಭಿಪ್ರಾಯಗಳನ್ನು ಪಡೆದ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿದ್ದಾರೆ. ರಾಜ್ಯ ರಾಜಕೀಯದ ಬೆಳವಣಿಗೆಗಳ ಕುರಿತು ಸಮಗ್ರ ಮಾಹಿತಿಯು ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ

ಸಮ್ಮಿಶ್ರ ಸರ್ಕಾರ ವಿರುದ್ಧ ಬೇಸರಗೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ಮೊದಲು ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಮಿತ್ರ ಪಕ್ಷಗಳ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಶಾಸಕರು ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮಾಹಿತಿ ನೀಡಿದರು. ಶಾಸಕರ ರಾಜೀನಾಮೆಯಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಬೆಳವಣಿಗೆ ಕುರಿತು ಮಾಹಿತಿಯನ್ನು ಒದಗಿಸಿದ್ದಾರೆ ಎನ್ನಲಾಗಿದೆ.