ಲಖನೌ[ಜೂ.17]: ಹೊಸ ತಳಿಯ ಮಾವು ಅಭಿವೃದ್ಧಿಪಡಿಸುವುದಕ್ಕೆ ಖ್ಯಾತಿ ಹೊಂದಿರುವ ಪದ್ಮಶ್ರೀ ಪುರಸ್ಕೃತ, ಉತ್ತರಪ್ರದೇಶದ ಕಲೀಮುಲ್ಲಾ ಖಾನ್‌, ಈ ಬಾರಿ ತಾವು ನೂತನವಾಗಿ ಅಭಿವೃದ್ಧಿಪಡಿಸಿರುವ ನೂತನ ತಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೆಸರು ಇಟ್ಟಿದ್ದಾರೆ.

‘ಜನರು ಯಾವಾಗಲೂ ಉತ್ತಮ ವ್ಯಕ್ತಿಗಳನ್ನು ಮಾತ್ರವೇ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಜನರು ಬರುತ್ತಾರೆ ಹೋಗುತ್ತಾರೆ. ಆದರೆ ಮಾವಿನ ಹಣ್ಣುಗಳು ಶಾಶ್ವತ. ಹೀಗಾಗಿ ಖ್ಯಾತನಾಮರ ಹೆಸರನ್ನು ನಾನು ಮಾವಿನ ಹಣ್ಣುಗಳಿಗೆ ಇಡುತ್ತೇನೆ. ಅದೇ ಕಾರಣಕ್ಕೆ ನೂತನ ತಳಿಗೆ ಅಮಿತ್‌ ಶಾ ಹೆಸರಿಟ್ಟಿದ್ದೇನೆ. ಅಮಿತ್‌ ಶಾ ಅವರು ತಾವು ಹಾಕಿಕೊಂಡ ಗುರಿಯನ್ನು ಮುಟ್ಟುವವರೆಗೂ ವಿರಮಿಸದೆ ಕಾರ್ಯ ನಿರ್ವಹಿಸುತ್ತಾರೆ. ಅದೇ ರೀತಿಯ ಗುಣಗಳು ಈ ಮಾವಿನ ಹಣ್ಣಿನ ತಳಿಯಲ್ಲಿಯೂ ಇದ್ದು, ಈ ಹಣ್ಣಿನ ರುಚಿ ಸಾರ್ವಜನಿಕರು ಇಷ್ಟಪಡುತ್ತಾರೆ’ ಎಂದು ಕಲೀಮುಲ್ಲಾ ಭರವಸೆ ವ್ಯಕ್ತಪಡಿಸಿದರು.

ಈ ಹಿಂದೆ ಕಲೀಮುಲ್ಲಾ ಅವರು ನರೇಂದ್ರ ಮೋದಿ, ನಟ ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ರೈ, ಕ್ರಿಕೆಟಿಗ ತೆಂಡೂಲ್ಕರ್‌, ಕ ಅಖಿಲೇಶ್‌ ಯಾದವ್‌, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಮೊದಲಾದವರ ಹೆಸರನ್ನು ಹೊಸ ತಳಿಗೆ ಇಟ್ಟಿದ್ದರು.