ಬೆಂಗಳೂರು[ಮೇ.02]: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಲದಿಂದ ರಾಜ್ಯ ರಾಜಕಾರಣದಲ್ಲಿ ಶೀಘ್ರದಲ್ಲಿಯೇ ಭಾರೀ ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್.ಎಂ.ಕೃಷ್ಣ ಅವರ ಜನ್ಮದಿನ ಪ್ರಯುಕ್ತ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಶುಭ ಕೋರಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ ಹಿರಿಯ ರಾಜಕಾರಣಿ. ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಅವರ ಬಲದಿಂದ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ವೇಳೆ ಎಸ್.ಎಂ.ಕೃಷ್ಣ ಅವರು ರಾಜ್ಯದ ವಿವಿಧೆಡೆ ಪ್ರಚಾರ ಕೈಗೊಂಡು ಪಕ್ಷಕ್ಕೆ ಬಲ ತುಂಬಿದರು. ರಾಜ್ಯದಲ್ಲಿ ಬಿಜೆಪಿ 22 ಸ್ಥಾನದಲ್ಲಿ ಜಯಗಳಿಸುವುದು ಖಚಿತ. ರಾಷ್ಟ್ರದಲ್ಲಿ ಬಿಜೆಪಿ 290ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯಕ್ಕೆ ಕೃಷ್ಣ ಅವರ ಸೇವೆ ಅತ್ಯಗತ್ಯವಾಗಿದೆ. ಅವರು ೧೦೦ ವರ್ಷ ಬದುಕು ಬೇಕೆಂಬುದು ನಮ್ಮೆಲ್ಲರ ಆಸೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಕೃಷ್ಣ ಮುತ್ಸದ್ದಿ ರಾಜಕಾರಣಿ. ಯಾವುದೇ ಸ್ಥಾನವನ್ನು ಅವರು ಅಪೇಕ್ಷೆಪಟ್ಟಿಲ್ಲ. ಸಮಯ ಬಂದಾಗ ಅವರ ಅನುಭವವನ್ನು ಪಕ್ಷವು ಬಳಸಿಕೊಳ್ಳಲಿದೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅವರನ್ನು ಆಹ್ವಾನಿತರನ್ನಾಗಿ ಸೇರಿಸಲಾಗಿದೆ ಎಂದರು.

ನಿರೀಕ್ಷೆ ಮಾಡಿರಲಿಲ್ಲ: ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ಮುಖಂಡರು ಆಗಮಿಸಿ ಶುಭ ಕೋರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸಾಮಾನ್ಯವಾಗಿ ಹುಟ್ಟುಹಬ್ಬದಂದು ಬೆಂಗಳೂರಿ ನಲ್ಲಿ ಇರುತ್ತಿರಲಿಲ್ಲ. ಖುದ್ದು ಮನೆಗೆ ಬಂದು ಶುಭ ಕೋರಿರುವುದು ಅತೀವ ಸಂತಸವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಹರ್ಷ ವ್ಯಕ್ತಪಡಿಸಿದರು.

ಎಲ್ಲರ ಆಶೀರ್ವಾದದಿಂದ ಸಾರ್ವಜನಿಕ ಜೀವನದಲ್ಲಿ ಕೆಲ ಕಾಲ ಇನ್ನೂ ಉತ್ಸಾಹದಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತೇನೆ. ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ಬಳಿಕ ಏನೆಲ್ಲಾ ಪ್ರಕ್ರಿಯೆಗಳು ನಡೆಯಲಿವೆ ಎಂಬುದನ್ನು ಕುತೂಹಲದಿಂದ ನೋಡುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಕ್ಷದ ಪರ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದು ತಿಳಿಸಿದರು. ಈ ವೇಳೆ, ಆರ್.ಅಶೋಕ್, ಅರ ವಿಂದ ಲಿಂಬಾವಳಿ, ಪಿ.ಸಿ.ಮೋಹನ್, ಪ್ರತಾಪ್ ಸಿಂಹ, ಎ.ಎಚ್.ಆನಂದ್ ಸೇರಿದಂತೆ ಇತರರು ಕೃಷ್ಣ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದರು.