Asianet Suvarna News Asianet Suvarna News

ನಿವೃತ್ತಿ ನಂತರವೂ ಇತಿಹಾಸ ಸೃಷ್ಟಿಸಿದ ನ್ಯಾ. ದೀಪಕ್ ಮಿಶ್ರಾ

ನಿವೃತ್ತ  ನ್ಯಾಯಮೂರ್ತಿಗಳಾದ ಬಾಲಕೃಷ್ಣನ್, ಸದಾಶಿವಮ್ ರೀತಿಯ ಸಮಯ ಸಾಧಕತನ ಗೆಲ್ಲುವುದೋ ಅಥವಾ ವರ್ಮಾ, ಲೋಧಾ ರೀತಿಯ ಪ್ರಾಮಾಣಿಕತೆಯೋ? ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿ ನಂತರ ಏನು
ಮಾಡುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅವರ ವೃತ್ತಿ ಜೀವನದ ಐತಿಹಾಸಿಕ ತೀರ್ಪುಗಳಿವು. 

A historical journey of justice Deepak Mishra
Author
Bengaluru, First Published Oct 7, 2018, 3:25 PM IST

ಬೆಂಗಳೂರು (ಅ. 07): ಮುಖ್ಯ ನ್ಯಾಯಮೂರ್ತಿಗಳು ಬರುತ್ತಾರೆ ಮತ್ತು ಮುಖ್ಯ ನ್ಯಾಯಮೂರ್ತಿಗಳು ಹೋಗುತ್ತಾರೆ. ಆದರೆ ಈಗ ನಿವೃತ್ತರಾಗಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಕೆಲವು ಕಾರಣಗಳಿಗಾಗಿ ಐತಿಹಾಸಿಕ.

ಉದಾಹರಣೆಗೆ ಅವರು ವಾಗ್ದಂಡನೆ ಅರ್ಜಿಯನ್ನು ಎದುರಿಸಬೇಕಾಗಿ ಬಂದ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯೊಬ್ಬರ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಆಕ್ಷೇಪಗಳನ್ನು ಹೊಂದಿದ್ದು ಮತ್ತು ಪತ್ರಿಕಾಗೋಷ್ಠಿಯನ್ನು ನಡೆಸಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು ಇವರ ವಿರುದ್ಧವೇ.

ಈ ಉದ್ರೇಕಕಾರಿ ಸಾರ್ವಜನಿಕ ಪ್ರದರ್ಶನ ನಡೆದದ್ದು ಇದೇ ಜನವರಿಯಲ್ಲಿಯೇ ಮತ್ತು ವಾಗ್ದಂಡನೆ ವಿಧಿಸುವ ಪ್ರಯತ್ನ ನಡೆದದ್ದು ಇತ್ತೀಚೆಗೆ ಏಪ್ರಿಲ್ ನಲ್ಲಿ, ಕೇವಲ 6 ತಿಂಗಳ ಹಿಂದೆ.  ಈ ಕೆಲವೇ ತಿಂಗಳುಗಳಲ್ಲಿ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಅವರ ವ್ಯಕ್ತಿತ್ವ ಪರಿವರ್ತನೆಯಲ್ಲಿ ಸಾಗಿತು ಮತ್ತು ಕೀರ್ತಿಯ ಜ್ವಾಲೆಯ ರೀತಿಯಲ್ಲಿ ಅವರು ನಿವೃತ್ತರಾದಂತೆ ಕಂಡರು.

ಏನು ಸಂಭವಿಸಿತು? ನ್ಯಾಯಮೂರ್ತಿ ಮಿಶ್ರಾ ಅವರು ಬಿಜೆಪಿಯ ಕಡೆ ವಾಲುತ್ತಿರುವಂತೆ ಕಂಡಿದ್ದರಿಂದ ಅವರ ವಿರುದ್ಧ ತರಲಾದ ವಾಗ್ದಂಡನೆ ಕಾಂಗ್ರೆಸ್ಸಿನ ರಾಜಕೀಯ ಕೃತ್ಯವಾಗಿತ್ತೆ? ಅವರು ಬಿಜೆಪಿ ಕಡೆಗೆ ವಾಲಿದ್ದರೆ? ತಮ್ಮ ಗೌರವವನ್ನು ಮರಳಿ ಪಡೆದುಕೊಳ್ಳಲು ಇವೆಲ್ಲವುಗಳಿಂದ ಅವರು ಕೊನೆಯ ಕೆಲವು ತಿಂಗಳುಗಳಲ್ಲಿ ಹೊರಬಂದರೆ? ತಮ್ಮ ಟೀಕಾಕಾರರು ಕ್ಷುಲ್ಲಕ ಮನಸ್ಸಿನವರು ಎಂದು ಸಿದ್ಧಮಾಡಲು ಅವರು ಹೊರಟಿದ್ದರೆ?

ನ್ಯಾಯಮೂರ್ತಿ ಮಿಶ್ರಾ ಅವರ ವೃತ್ತಿ ಜೀವನದ ಮೈಲಿಗಲ್ಲು ಎನ್ನಬಹುದಾದ ಈ ತೀರ್ಪುಗಳ ಮಹತ್ವವನ್ನು ಯಾರೂ ಕಡೆಗಣಿಸಲಾರರು. 1993 ರಲ್ಲಿ ಅವರು ಯಾಕೂಬ್ ಮೆಮನ್‌ಗೆ ಮುಂಬೈ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಯನ್ನು ದೃಢಪಡಿಸುವ ಧೈರ್ಯ ತೋರಿಸಿದರು.

ಇದಕ್ಕಾಗಿ ಅವರಿಗೆ ಕೊಲೆ ಬೆದರಿಕೆಗಳೂ ಬಂದವು. ವ್ಯಕ್ತಿ ಜೀವಂತ ಇದ್ದಾಗ ಬರೆದ ವಿಲ್ ಆಧಾರದ ಮೇಲೆ ಮೆದುಳು ನಿಷ್ಕ್ರಿಯರಾದ ವ್ಯಕ್ತಿಗಳಿಗೆ ಸುಖಮರಣಕ್ಕೆ ಅವಕಾಶವನ್ನು ಅವರು ಒದಗಿಸಿದರು. ನಂತರ ತಮ್ಮ ವೃತ್ತಿಯ ಕೊನೆಯ ದಿನಗಳಲ್ಲಿ ಅವರು ಎಲ್‌ಜಿಬಿಟಿ (ಲೈಂಗಿಕ ಅಲ್ಪಸಂಖ್ಯಾತರು) ಸಮುದಾಯಗಳಿಗೆ ಸಂವಿಧಾನದ ರಕ್ಷಣೆ ಒದಗಿಸಿದರು, ವ್ಯಭಿಚಾರವನ್ನು ಅಪರಾಧವಲ್ಲ ಎಂದು ಹೇಳಿದರು, ಶಬರಿಮಲೆಗೆ ಸ್ತ್ರೀಯರು ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟರು. ಇವೆಲ್ಲ ರಾಜಕೀಯದ ಕಡಿಮೆ ಪ್ರಾಮುಖ್ಯತೆ ಇರುವ ಸಾಮಾಜಿಕ ವಿಷಯಗಳು.

ತಮ್ಮ ರಾಜಕೀಯ ಶಾಖೆಗಳ ಕುರಿತು ಚಿಂತೆ ಮಾಡದೆಯೇ ನ್ಯಾಯ ಮೂರ್ತಿಯಾದವರು ಅವುಗಳ ಮೇಲೆ ತಮ್ಮ ನಿಲವು ತಳೆಯಬಹುದು. ಆದರೆ ಮಿಶ್ರಾ ಅವರ ಪೀಠ ತೀರ್ಪು ನೀಡಿದ ಉಳಿದ 2 ವಿಷಯಗಳು -ಆಧಾರ್ ಮತ್ತು ಅಯೋಧ್ಯೆ- ರಾಜಕೀಯ ಸೂಕ್ಷ್ಮದ್ದು. ಇವುಗಳ ಮೇಲೆ ಬಂದ ತೀರ್ಪುಗಳಿಗೆ ಸಾರ್ವತ್ರಿಕ ಮೆಚ್ಚುಗೆ ಸಿಗಲಿಲ್ಲ. ನಾಗರಿಕರ ಕುರಿತ ಎಲ್ಲ ರೀತಿಯ ಮಾಹಿತಿಯನ್ನು ಹೊಂದಿರುವ ಆಧಾರ್ ಎಲ್ಲ ರೀತಿಯ ಸಂಸ್ಥೆಗಳಿಗೆ ಮತ್ತು ಸರ್ಕಾರಕ್ಕೆ ಲಭ್ಯವಾ ಗುತ್ತಿತ್ತು.

ಈ ತೀರ್ಪು ಆಧಾರ್ ಮಾಹಿತಿಯನ್ನು ಕೆಲವಕ್ಕೆ ಅನುವು ಮಾಡಿ ಕೆಲವಕ್ಕೆ ನಿರಾಕರಿಸಿದೆ. ಈಗಾಗಲೇ ಲಭ್ಯವಾಗಿರುವ ಅಪಾರ ಪ್ರಮಾಣದ ಅಂಕಿ-ಅಂಶಗಳ ಮಾಹಿತಿಯ ಸಂಬಂಧದಲ್ಲಿ ಯಾವುದೇ ಪರಿಹಾರ ಹೇಳಿಲ್ಲ. ನಾಗರಿಕರ ಮಾಹಿತಿ ಯನ್ನು ಬಳಕೆ/ದುರ್ಬಳಕೆ ಮಾಡಿಕೊಳ್ಳುವ ಸರ್ಕಾರದ ಸಾಮರ್ಥ್ಯವನ್ನು ಮೊಟಕುಗೊಳಿಸದೆಯೇ ಪ್ರಗತಿಪರ ಅನುಸಂಧಾನ ಎಂಬ ಭಾವನೆಯನ್ನು ಮೂಡಿಸಿದ್ದಷ್ಟೇ ಈ ತೀರ್ಪಿನ ಸಾಧನೆ.

ಇದನ್ನು ನಾವು ಎಚ್ಚರಿಕೆಯ ಮತ್ತು ಬುದ್ಧಿವಂತಿಕೆಯ ತೀರ್ಪು ಎಂದು ಹೇಳಬಹುದೇ ಹೊರತು ಜನಪರ ತೀರ್ಪು ಎಂದು ಹೇಳುವಂತಿಲ್ಲ. ಅದೇ ರೀತಿ ಅಯೋಧ್ಯೆ ವಿಷಯದಲ್ಲೂ. ಮುಸ್ಲಿಮರಿಗೆ ಪ್ರಾರ್ಥನೆ ಮಾಡುವುದಕ್ಕೆ ಮಸೀದಿಯ ಅಗತ್ಯವಿಲ್ಲ ಎಂಬುದು ತೀರ್ಪು. ಎಲ್ಲಿ ಬೇಕೆಂದರೆ ಅಲ್ಲಿ ಪ್ರಾರ್ಥನೆ ಮಾಡುವ ಸಂಪ್ರದಾಯ ಅವರಲ್ಲಿದೆ.

(ಅದು ನಿಜ. ಅವರು ಅಂಗಡಿಯ ನೆಲದಲ್ಲಿ ಚಾಪೆಯನ್ನು ಹಾಸಿ ಅದರ ಮೇಲೆಯೇ ನಮಾಜು ಮಾಡಬಹುದು. ಆದರೆ ಏಪ್ರಿಲ್‌ನಲ್ಲಿ ಗುರುಗ್ರಾಮದಲ್ಲಿ ಅವರು ಬಯಲಿನಲ್ಲಿ ಪ್ರಾರ್ಥನೆ ನಡೆಸಲು ಯತ್ನಿಸಿದಾಗ ಪೊಲೀಸರ ರಕ್ಷಣೆ ಪಡೆದುಕೊಂಡರು. ಆದರೆ ಇದರಿಂದ ‘ಕಾರ್ಯಕರ್ತರು’ ಪ್ರತ್ಯಕ್ಷರಾಗುವುದನ್ನು ಮತ್ತು ಅವರನ್ನು ಚದುರಿಸುವಾಗ ತ್ವೇಷದ ವಾತಾವರಣ ಉಂಟಾಗುವುದನ್ನು ತಪ್ಪಿಸಲು ಆಗಲಿಲ್ಲ.)

ಈ ತೀರ್ಪಿನಲ್ಲಿರುವ ಅಲಿಖಿತ ಸಂದೇಶವೇನೆಂದರೆ ಅಯೋಧ್ಯೆಯಲ್ಲಿ ಹೊಸದಾದ ಬಾಬ್ರಿ ಮಸೀದಿ ಯನ್ನು ನಿರ್ಮಿಸುವ ನಿಜವಾದ ಅಗತ್ಯ ಇಲ್ಲವೆನ್ನು ವುದು. ಇದರ ಇನ್ನೊಂದು ಅರ್ಥವೆಂದರೆ ಆ ಜಾಗದಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಕ್ಕೆ ಯಾವುದೇ ನಿಜವಾದ ನ್ಯಾಯವಾದ ಕಾರಣ ಇಲ್ಲ ಎನ್ನುವುದು.

ಮತ್ತೆ, ಇದು ಎಚ್ಚರಿಕೆಯ ಮತ್ತು ಬುದ್ಧಿವಂತಿಕೆಯ ತೀರ್ಪು  ದೀಪಕ್ ಮಿಶ್ರಾ ಅವರ ಕೋರ್ಟ್‌ನ ಜಮಾ- ಖರ್ಚಿನ ಪಟ್ಟಿ ಏನೆಂದರೆ, ಆಳುವ ವ್ಯವಸ್ಥೆಗೆ ಯಾವುದೇ ರೀತಿಯ ಆಸಕ್ತಿ ಇಲ್ಲದ ಪ್ರಕರಣಗಳಲ್ಲಿ ಪ್ರಗತಿಪರವಾದ ತೀರ್ಪಿನ ಗುಚ್ಛವನ್ನು ನೀಡಿದರು. ಆದರೆ ರಾಜಕೀಯ ಆಯಾಮವುಳ್ಳ 2 ಪ್ರಕರಣಗಳಲ್ಲಿ ಅಧಿಕಾರದಲ್ಲಿರುವವರನ್ನು ಗಮನದಲ್ಲಿಟ್ಟು ಕೊಂಡರು.

ಆ ಎರಡು ಪ್ರಕರಣಗಳಲ್ಲಿ ಬಂದಿರುವ ತೀರ್ಪು ಅಧಿಕಾರದಲ್ಲಿರುವ ಪಕ್ಷವನ್ನು ಸಂಪ್ರೀತಿಗೊಳಿಸಬಹುದೇ? ನ್ಯಾಯಮೂರ್ತಿ ಮಿಶ್ರಾ ಅವರು ನಿವೃತ್ತರಾಗುವ ಹಿಂದಿನ ದಿನ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನಿವೃತ್ತಿಯ ನಂತರ ಕನಿಷ್ಠ ಎರಡು ವರ್ಷಗಳವರೆಗಾದರೂ ಸರ್ಕಾರದ ಯಾವುದೇ ಜವಾಬ್ದಾರಿಗಳನ್ನು ಅವರು ಒಪ್ಪಿಕೊಳ್ಳದಂತೆ ಅಂಗೀಕರಿಸಿದ ಔಪಚಾರಿಕ ಗೊತ್ತುವಳಿಯು ಏನಾದರೂ ಕೆಲಸ ಮಾಡುವುದೆ?

ಇದೊಂದು ಪುನರಾವರ್ತನೆಯಾಗುವ ವಿಷಯ. ಮಹಾನ್ ನ್ಯಾಯಮೂರ್ತಿಗಳಾದ ಜೆ.ಎಸ್. ವರ್ಮಾ ನಿವೃತ್ತಿಯ ನಂತರ ನಿವೃತ್ತರಾಗಿಯೇ ಉಳಿದು ಉದಾಹರಣೆಯಾಗಿ ನಿಂತಿದ್ದಾರೆ. ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರು ತಮ್ಮ ನಿವೃತ್ತಿಯ ದಿನ ಯಾವುದೇ ನ್ಯಾಯಾಧೀಶರು ತಮ್ಮ ನಿವೃತ್ತಿಯ ನಂತರ ಸರ್ಕಾರದ ಅಥವಾ ಸಾಂವಿಧಾನಿಕ ಹುದ್ದೆಯನ್ನು ಒಪ್ಪಿಕೊಳ್ಳಬಾರದು ಎಂದು ಹೇಳಿದ್ದರು.

ಆದರೆ ಲೋಧಾ ಅವರ ಉತ್ತರಾಧಿಕಾರಿ ಪಿ.ಸದಾಶಿವಮ್ ಸುಪ್ರೀಂಕೋರ್ಟ್‌ನಿಂದ ನೇರವಾಗಿ ಕೇರಳದ ರಾಜಭವನಕ್ಕೆ ನಡೆದುಬಿಟ್ಟರು. ಮೊದಲಿನ ಸಿಜೆಐ ಕೆ.ಜಿ.ಬಾಲಕೃಷ್ಣನ್ ರೀತಿಯಲ್ಲಿ ಕೆಲಸ ಒಪ್ಪಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸದಾಶಿವಮ್  ಹೇಳಿದರು. ಇದು ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಂದ ದೊರೆತ ಪ್ರತಿಫಲ ಎಂದು ಟೀಕಾಕಾರರು ಹೇಳಿದರು.

‘ನಿವೃತ್ತಿ ಪೂರ್ವದ ತೀರ್ಪುಗಳು ನಿವೃತ್ತಿ ನಂತರದ ಕೆಲಸದ ಅಪೇಕ್ಷೆಯಿಂದ ಪ್ರಭಾವಿತವಾಗಿರುತ್ತವೆ’ ಎಂದು ಜೇಟ್ಲಿಯವರು ಚೆನ್ನಾಗಿಯೇ ಹೇಳಿದ್ದರು. ಆದರೆ ಅದು 2012 ರಲ್ಲಿ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ. ಈಗ ಅವರು ಅಧಿಕಾರದಲ್ಲಿದ್ದಾರೆ. ಅವರ ದೃಷ್ಟಿಕೋನ ಮೊದಲಿನಷ್ಟು ಸ್ಪಷ್ಟವಾಗಿಲ್ಲ. ಹೀಗೆ, ಬಾಲಕೃಷ್ಣನ್-ಸದಾಶಿವಮ್ ರೀತಿಯ ಸಮಯಸಾಧಕತನ ಗೆಲ್ಲುವುದೋ ಅಥವಾ ವರ್ಮಾ-ಲೋಧಾ ರೀತಿಯ ಪ್ರಾಮಾಣಿಕತೆಯೋ?

ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿ ನಂತರ ಏನು ಮಾಡುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂಬುದು ಮಾತ್ರ ನಮಗೆ ಗೊತ್ತಿದೆ. ಇದು ದೇಶಕ್ಕೆ ಒಳ್ಳೆಯದು.

- ಟಿ ಜೆ ಎಸ್ ಜಾರ್ಜ್ 

Follow Us:
Download App:
  • android
  • ios