93 ಸನ್ನಡತೆ ಕೈದಿಗಳ ಬಿಡುಗಡೆಗೆ ನಿರ್ಧಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 7:39 AM IST
93 prisoners to release from jail
Highlights

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ನಡತೆ ಆಧಾರದ ಮೇಲೆ 93 ಮಂದಿ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.

ಬೆಂಗಳೂರು :  ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ನಡತೆ ಆಧಾರದ ಮೇಲೆ 93 ಮಂದಿ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಅವರು, ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವವರ ಪೈಕಿ ಸನ್ನಡತೆಯುಳ್ಳ ಕೈದಿಗಳ ಪಟ್ಟಿಮಾಡಲಾಗಿದೆ. 93 ಮಂದಿಯ ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ ಹಿಂಪಡೆಯುವ ಬಗ್ಗೆ ಉಪಸಮಿತಿ:

ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಪರಿಶೀಲಿಸಿ ಸಚಿವ ಸಂಪುಟ ಸಭೆಗೆ ಸೂಕ್ತ ಶಿಫಾರಸು ಮಾಡಲು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಉಪ ಸಮಿತಿ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಮಿತಿಯಲ್ಲಿ ಸಾರಿಗೆ ಸಚಿವ, ಕೃಷಿ ಸಚಿವ, ಪೌರಾಡಳಿತ ಸಚಿವ, ಸಹಕಾರ ಸಚಿವ ಹಾಗೂ ಆಹಾರ ಸಚಿವರು ಸದಸ್ಯರಾಗಿದ್ದಾರೆ. ಉಪ ಸಮಿತಿಯು ನ್ಯಾಯಾಲಯದಲ್ಲಿರುವ ಅಪರಾಧ ಪ್ರಕರಣ ಪರಿಶೀಲಿಸಿ ಹಿಂಪಡೆಯಬಹುದಾದ ಪ್ರಕರಣಗಳ ಬಗ್ಗೆ ವರದಿ ನೀಡಲಿದೆ ಎಂದು ಬಂಡೆಪ್ಪ ಕಾಶೆಂಪೂರ್‌ ತಿಳಿಸಿದರು.

ಹೊಳೆನರಸೀಪುರದಲ್ಲಿ ರೈಲ್ವೆ ಯಾರ್ಡ್‌:

ಇದೇ ವೇಳೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ರೈಲ್ವೇ ಸ್ಟೇಷನ್‌ ಯಾರ್ಡ್‌ ನಿರ್ಮಾಣ ಮಾಡಲು 39.39 ಕೋಟಿ ರು. ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರವು ತಲಾ ಶೇ.50ರಷ್ಟುಅನುಪಾತದಲ್ಲಿ ಯೋಜನೆಯ ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಿದರು.

ಶೂ, ಸಾಕ್ಸ್‌ ಖರೀದಿಗೆ ಒಪ್ಪಿಗೆ:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸುತ್ತಿರುವ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌, ಟೈ ಮತ್ತು ಬೆಲ್ಟ್‌ಗಳನ್ನು ಖರೀದಿಸಲು 10.36 ಕೋಟಿ ರು. ಮೊತ್ತಕ್ಕೆ ಅನುಮೋದನೆ ನೀಡಲಾಯಿತು.

loader