ನವದೆಹಲಿ [ಅ.07]: ಪ್ರಧಾನಮಂತ್ರಿ ಜನ ಆರೋಗ್ಯ- ಆಯುಷ್ಮಾನ್‌ ಭಾರತ ಯೋಜನೆಯ ಮೊದಲ ವರ್ಷವೇ ದೇಶಾದ್ಯಂತ 90 ಸಾವಿರ ಮಂದಿ ಕ್ಯಾನ್ಸರ್‌ ಚಿಕಿತ್ಸೆ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಪೈಕಿ ತಮಿಳುನಾಡಿನಲ್ಲೇ ಅಧಿಕ ಮಂದಿಗೆ ಚಿಕಿತ್ಸೆ ಲಭ್ಯವಾಗಿದೆ.

ಕ್ಯಾನ್ಸರ್‌ ಎಂಬುದು ದುಬಾರಿ ವೆಚ್ಚದ ಚಿಕಿತ್ಸೆ. ಕ್ಯಾನ್ಸರ್‌ ಬಂದರೆ ಖರ್ಚಿನ ಕಾರಣಕ್ಕೆ ರೋಗಿಗಳು, ಬಂಧುಗಳು ಪರಿತಪಿಸುವಂತಾಗುತ್ತದೆ. ಅಂಥದ್ದರಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಬಡವರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿರುವುದು ಗಮನಾರ್ಹವಾಗಿದೆ.

ದೇಶದ 1.8 ಲಕ್ಷ ಆಸ್ಪತ್ರೆಗಳಲ್ಲಿ 90 ಸಾವಿರಕ್ಕೂ ಹೆಚ್ಚು ಮಂದಿ ಈ ಯೋಜನೆಯಡಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. 40,056 ಫಲಾನುಭವಿಗಳೊಂದಿಗೆ ಹೆಚ್ಚಿನ ಮಂದಿ ಚಿಕಿತ್ಸೆ ಪಡೆದ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ಕೇರಳ (22,000), ಮಧ್ಯಪ್ರದೇಶ (19,455), ಛತ್ತೀಸ್‌ಗಢ (15,997) ಹಾಗೂ ಗುಜರಾತ್‌ (14,380) ನಂತರದ ಸ್ಥಾನದಲ್ಲಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿ ವರ್ಷ ದೇಶದಲ್ಲಿ 11.57 ಲಕ್ಷ ಹೊಸ ಕ್ಯಾನ್ಸರ್‌ ರೋಗಿಗಳು ಬೆಳಕಿಗೆ ಬರುತ್ತಾರೆ. 7.84 ಲಕ್ಷ ಕ್ಯಾನ್ಸರ್‌ ಸಾವುಗಳು ದೇಶದಲ್ಲಿ ಸಂಭವಿಸುತ್ತಿವೆ. ವರ್ಷದ ಯಾವುದೇ ಅವಧಿಯಲ್ಲಿ ದೇಶದಲ್ಲಿ 22.5 ಲಕ್ಷ ಕ್ಯಾನ್ಸರ್‌ ರೋಗಿಗಳು ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತವೆ.