ಪುಣೆ[ಜು.20]: ಮಹಾರಾಷ್ಟ್ರದ ಪುಣೆ- ಸೋಲಾಪುರ  ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ಅಪಘಾತವೊಂದು ನಡೆದಿದೆ. ಕಾರು ಹಾಗೂ ಟ್ರಕ್ ನಡುವೆ ನಡೆದ ಡಿಕ್ಕಿಯಲ್ಲಿ 9 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 

ಶುಕ್ರವಾರ ರಾತ್ರಿ ಸುಮಾರು 1.30ಗೆ ಈ ಅಪಘಾತ ಸಂಭವಿಸಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿದ್ದೇ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಕಾರಿನಲ್ಲಿದ್ದವರು ಸೋಲಾರ್ ಪುರದೆಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪುಣೆಯಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. 

ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು 'ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಪುಣೆಯ ಯಾವತ್ ನಿವಾಸಿಗಳಾಗಿದ್ದರು. ಇವರೆಲ್ಲರೂ 19-23 ವಯಸ್ಸಿನವರು. ಕಾರು ಬಹಳ ವೇಗವಾಗಿ ಚಲಾಯಿಸುತ್ತಿದ್ದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾರೆ. ಹೀಗಾಗಿ ಕಾರು ಮೊದಲು ಡಿವೈಡರ್ ಗೆ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ' ಎಂದಿದ್ದಾರೆ.