ಒಟ್ಟು ಪರೀಕ್ಷೆ ಬರೆದ 58, 932ರಲ್ಲಿ 19,601 ಮಂದಿ ಕರ್ನಾಟಕದವರು, ಉಳಿದ 39,331 ಜನ ಬೇರೆ ಬೇರೆ ರಾಜ್ಯದವರು ಎಂದು ಕಾಮೆಡ್‌-ಕೆ ತಿಳಿಸಿದೆ.
ಬೆಂಗಳೂರು(ಮೇ.28): ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ್ದ ಯುಜಿಇಟಿ ಫಲಿತಾಂಶ ಪ್ರಕಟವಾಗಿದ್ದು, ಟಾಪ್ 10 ಶ್ರೇಯಾಂಕಗಳಲ್ಲಿ 9 ಶ್ರೇಯಾಂಕಗಳು ಬೆಂಗಳೂರಿನವರ ಪಾಲಾಗಿವೆ.
ಅಲಹಾಬಾದ್ ಮೂಲದ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮಯಾಂಕ್ ಬಾರನ್ವಾಲ್ ಪ್ರಥಮ ಶ್ರೇಯಾಂಕ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವಿಶ್ವಜಿತ್ ಪ್ರಕಾಶ್ ಹೆಗಡೆ 2ನೇ ಶ್ರೇಯಾಂಕ ಗಳಿಸಿದ್ದಾರೆ. ವಿಶ್ವಜಿತ್ ಶಿರಸಿ ಮೂಲದವರಾದರು ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಓದಿದ್ದು ಕನಕಪುರ ರಸ್ತೆಯ ದೀಕ್ಷಾ ಪಿಯು ಕಾಲೇಜಿನಲ್ಲಿ. ಇನ್ನು ಮೂರನೇ ಶ್ರೇಯಾಂಕವನ್ನು ಹಾಸನ ಮೂಲದ ಬೆಂಗಳೂರಿನ ಕುಮಾರನ್ಸ್ ಶಾಲೆಯ ವಿದ್ಯಾರ್ಥಿ ರುದ್ರಪಟ್ನ ವಲ್ಲಭ ರಮಾಕಾಂತ್ ಪಡೆದುಕೊಂಡಿದ್ದಾರೆ. ಮೇ 29ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಿದ್ದ ಕಾಮೆಡ್-ಕೆ ಸದ್ದಿಲ್ಲದೆ ಎರಡು ದಿನ ಮೊದಲೇ ಫಲಿತಾಂಶ ಪ್ರಕಟಿಸಿದೆ.
ಕಾಮೆಡ್-ಕೆ ವೆಬ್ಸೈಟ್ www.comedk.org ನಲ್ಲಿ ಲಾಗಿನ್ ಆಗುವ ಮೂಲಕ ವಿದ್ಯಾರ್ಥಿ ತನ್ನ ಶ್ರೇಯಾಂಕ ಕಾರ್ಡ್ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಮೊದಲ 100 ಶ್ರೇಯಾಂಕ ಪಡೆದವರಲ್ಲಿ 70 ಅಭ್ಯರ್ಥಿಗಳು ಕರ್ನಾಟಕದವರಾಗಿದ್ದಾರೆ. ಉಳಿದ 30 ಜನ ಬೇರೆ ಬೇರೆ ರಾಜ್ಯದವರಾಗಿದ್ದಾರೆ. ಮೊದಲ 1000 ಶ್ರೇಯಾಂಕಗಳಲ್ಲಿ 398 ಅಭ್ಯರ್ಥಿಗಳು ಕರ್ನಾಟಕದವರಾಗಿದ್ದು ಉಳಿದ 602 ಮಂದಿ ಹೊರ ರಾಜ್ಯದವರಾಗಿದ್ದಾರೆ. ಮೊದಲ 2000 ಶ್ರೇಯಾಂಕ ಪಡೆದಿರುವ ಅಭ್ಯರ್ಥಿಗಳಲ್ಲಿ 1423 ಜನ ಶೇ.70ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ.
ಒಟ್ಟು ಪರೀಕ್ಷೆ ಬರೆದ 58, 932ರಲ್ಲಿ 19,601 ಮಂದಿ ಕರ್ನಾಟಕದವರು, ಉಳಿದ 39,331 ಜನ ಬೇರೆ ಬೇರೆ ರಾಜ್ಯದವರು ಎಂದು ಕಾಮೆಡ್-ಕೆ ತಿಳಿಸಿದೆ.
ಪ್ರತಿ ವರ್ಷ ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟುಗಳ ಪ್ರವೇಶಕ್ಕೂ ಕಾಮೆಡ್-ಕೆ ನಡೆಸಲಾಗುತ್ತಿತ್ತು. ಇದೇ ಮೊದಲ ವರ್ಷ ನೀಟ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಕೇವಲ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ಮಾತ್ರ ಕಾಮೆಡ್-ಕೆ ನಡೆಸಿತ್ತು.
ಮೇ 14ರಂದು ನಡೆಸಲಾಗಿದ್ದ ಕಾಮೆಡ್-ಕೆ ಯುಜಿಇಟಿ ಪರೀಕ್ಷೆಗೆ ಈ ಬಾರಿ 70,655 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, 58,932 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ದೇಶದ 132 ನಗರಗಳಲ್ಲಿನ 290 ಕೇಂದ್ರಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಆನ್'ಲೈನ್'ನಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು.
