ಮುಂಬೈ[ಜು.23]: ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನ ಬಾಂದ್ರಾದಲ್ಲಿರುವ ಬೃಹತ್‌ ಕಟ್ಟಡವೊಂದರಲ್ಲಿ ಭಾರೀ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ದುರಂತಕ್ಕೀಡಾದ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ 84 ಮಂದಿಯನ್ನು ರಕ್ಷಣೆ ಮಾಡಿದರು.

ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕಟ್ಟಡದ ಮೂರು ಮತ್ತು ನಾಲ್ಕನೇ ಹಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಅಗ್ನಿ ಅನಾಹುತವನ್ನು ತಹಬದಿಗೆ ತರುವ ನಿಟ್ಟಿನಲ್ಲಿ 14 ಅಗ್ನಿಶಾಮಕ ವಾಹನಗಳು, ರೋಬೊಟ್‌ ಸೇರಿದಂತೆ ಆ್ಯಂಬುಲೆನ್ಸ್‌ಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆಯೊಬ್ಬರು, ‘ನಾವಿದ್ದ ಕಟ್ಟಡದಲ್ಲೇ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಗಾಬರಿಯಾದೆವು. ಈ ವೇಳೆ ಕಟ್ಟಡದಿಂದ ಹೊರಬರಲು ಮುಂದಾಗಿ, ಮೆಟ್ಟಿಲುಗಳನ್ನು ಹುಡುಕಿದೆವು. ಆದರೆ, ದಟ್ಟಹೊಗೆ ಹರಡಿಕೊಂಡಿದ್ದರಿಂದ ಸಾಧ್ಯವಾಗಲಿಲ್ಲ. ಈ ವೇಳೆ ನಮ್ಮನ್ನು ಅಗ್ನಿ ಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರತಂದರು’ ಎಂದು ಹೇಳಿದರು.