ಬಾಗಿಲು ಮುಚ್ಚಲಿರುವ ಮತ್ತೊಂದು ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ
ಬೆಂಗಳೂರಿನ ಮಾಲ್ ಸಂಸ್ಕೃತಿಗೆ ಮತ್ತೊಂದು ಚಿತ್ರಮಂದಿರ ಬಲಿಯಾಗುತ್ತಿದೆ. ಶಿಘ್ರದಲ್ಲೇ ಬೆಂಗಳೂರಿನ ಅತ್ಯಂತ ಹಳೆಯ ಪ್ರಸಿದ್ಧ ರೆಕ್ಸ್ ಚಿತ್ರಮಂದಿರ ಬಾಗಿಲು ಮುಚ್ಚಲಿದೆ.
ಬೆಂಗಳೂರು : ಪ್ರೇಕ್ಷಕರೇ ಗಮನಿಸಿ, ನಿಮ್ಮನ್ನು ರಂಜಿಸಿದ ಚಿತ್ರಮಂದಿರಕ್ಕೆ ಇದೇ ಕೊನೆಯ ಆಟ ಡಿಸೆಂಬರ್ 31ಕ್ಕೆ.
ಹೀಗೊಂದು ಪ್ರಕಟಣೆ ಹೊರಡಿಸುವ ಮೂಲಕ ಬೆಂಗಳೂರು ನಗರದ ಮಾಲ್ ಸಂಸ್ಕೃತಿಗೆ ಮತ್ತೊಂದು ಚಿತ್ರಮಂದಿರ ಕಣ್ಮು ಮುಚ್ಚಿದೆ. ಹೌದು, ಪ್ರತಿಷ್ಠಿತ ‘ರೆಕ್ಸ್’ ಚಿತ್ರಮಂದಿರ ಇನ್ನೂ ನೆನಪು ಮಾತ್ರ. ಹಲವು ದಶಕಗಳ ಇತಿಹಾಸವನ್ನು ಸಾರುತ್ತಿದ್ದ ಚಿತ್ರಮಂದಿರ ಈಗ, ತನ್ನ ಕೊನೆಯ ಆಟವನ್ನು ಮುಗಿಸಿ ಮರೆಯಾಗುವ ಮೂಲಕ ಅದೇ ಜಾಗದಲ್ಲಿ ಸುಸಜ್ಜಿತ ಮಾಲ್‌ವೊಂದರ ಹುಟ್ಟಿಗೆ ಕಾರಣವಾಗುತ್ತಿದೆ.
ಹೌದು, ಇದೇ ತಿಂಗಳು ರೆಕ್ಸ್ ಚಿತ್ರಮಂದಿರ ಕಾಯಂ ಆಗಿ ಬಾಗಿಲು ಮುಚ್ಚಿಕೊಳ್ಳುತ್ತಿದೆ. ಆ ಮೂಲಕ ಈಗಾಗಲೇ ಮರೆಯಾದ ಸಾಗರ್, ಕೆಂಪೇಗೌಡ, ಅಲಂಕಾರ್ ಮುಂತಾದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಾಲಿಗೆ ರೆಕ್ಸ್ ಸೇರಿಕೊಳ್ಳುತ್ತಿದೆ. ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಈ ರೆಕ್ಸ್ ಚಿತ್ರಮಂದಿರ 1930ರಲ್ಲಿ ಪಿವಿ ಹಾಲ್ ಹೆಸರಿನಲ್ಲಿ ಎರಡು ಆಡಿಟೋರಿಯಂಗಳು ಹುಟ್ಟಿಕೊಂಡವು. ಮುಂದೆ ಇದೇ ಆಡಿಟೋರಿಯಂಗಳೇ ರೆಕ್ಸ್ ಚಿತ್ರಮಂದಿರವಾಗಿ ಬದಲಾಯಿತು. ಆರಂಭದಲ್ಲಿ ಕೇವಲ ಇಂಗ್ಲಿಷ್ ಚಿತ್ರಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ರೆಕ್ಸ್, ಕಳೆದ ಎರಡ್ಮೂರು ವರ್ಷಗಳಿಂದ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳನ್ನೂ ಪ್ರದರ್ಶನ ಮಾಡುತ್ತಿತ್ತು.
ಐವತ್ತು ವರ್ಷಗಳಿಗೂ ಮೇಲ್ಪಟ್ಟು ಇತಿಹಾಸ ಇರುವ ರೆಕ್ಸ್‌ಗೆ ಇನ್ನೇನು ಕೆಲವೇ ವಾರಗಳು ಮಾತ್ರ ಜೀವ ಉಳಿದುಕೊಳ್ಳಲಿದ್ದು, ಈ ಜಾಗದಲ್ಲಿ ಮಾಲ್ ಹಾಗೂ ಮಲ್ಟಿಪ್ಲೆಕ್ಸ್ ಬರುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಿತ್ರಮಂದಿರದ ಮಾಲಿಕರು ಕಾರ್ಯ ಪ್ರವೃತ್ತರಾಗಿದ್ದಾರೆ. ಈ ನೂತನ ಮಾಲ್ ನಿರ್ಮಾಣಕ್ಕೆ ಪ್ರತಿಷ್ಠಿತ ಪ್ರೆಸ್ಟೀಜ್ ಗ್ರೂಪ್ ಜತೆಯಾಗುತ್ತಿದೆ.