ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ 6 ರಾಜ್ಯಗಳು ಈ ವರ್ಷ ಭೀಕರ ಬರಗಾಲಕ್ಕೆ ಒಳಗಾಗಿದೆ. ಅದರಲ್ಲೂ ಕರ್ನಾಟಕದ 30 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಕ್ಷಾಮವಿದ್ದು, ಒಟ್ಟಾರೆ ಶೇ.80ರಷ್ಟು ಕರ್ನಾಟಕದಲ್ಲಿ ನೀರಿನ ಕೊರತೆ ಹಾಗೂ ಬೆಳೆ ವೈಫಲ್ಯ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲೇ ಹೆಚ್ಚಿನ ಪ್ರಮಾಣದ ಬರ ಕರ್ನಾಟಕದಲ್ಲಿ ಕಂಡುಬಂದಿದ್ದರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ. ಈ ರಾಜ್ಯದ ೩೬ ಜಿಲ್ಲೆಗಳ ಪೈಕಿ 26 ರಲ್ಲಿ ಬರಗಾಲವಿದೆ. ಒಟ್ಟಾರೆ ಶೇ. 72 ಮಹಾರಾಷ್ಟ್ರ ಕ್ಷಾಮಕ್ಕೆ ತುತ್ತಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. ಕರ್ನಾಟಕ, ಮಹಾರಾಷ್ಟ್ರ ಮಾತ್ರವೇ ಅಲ್ಲದೆ ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳು ಬರಕ್ಕೆ ತುತ್ತಾಗಿವೆ. ಈ 6 ರಾಜ್ಯಗಳಲ್ಲಿ 1.95 ಕೋಟಿ ಹೆಕ್ಟೇರ್ ಬೆಳೆ ನಾಶವಾಗಿದ್ದು, ರಾಜ್ಯ ಸರ್ಕಾರಗಳು 16773 ಕೋಟಿ ರು. ಕೇಂದ್ರೀಯ ನೆರವಿಗೆ ಮೊರೆ ಇಟ್ಟಿವೆ ಎಂದು ಲೋಕಸಭೆಗೆ ಕೇಂದ್ರ ಕೃಷಿ ಸಚಿವ ರಾಧಾ ಮೋಹನ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.

ಭಾರೀ ಬರದ ಹಿನ್ನೆಲೆಯಲ್ಲಿ 6 ರಾಜ್ಯಗಳು, ಕೇಂದ್ರದ ನೆರವು ಕೋರಿವೆ. ಈ ಹಿನ್ನೆಲೆಯಲ್ಲಿ ಅಂತರ್ ಸಚಿವಾಲಯದ ಮಟ್ಟದ ಸಮಿತಿ ಯನ್ನು ರಚಿಸಲಾಗಿದೆ. ಈ ಸಮಿತಿಗಳು ಬರಪೀಡಿತ ರಾಜ್ಯಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಪರಿಹಾರದ ಪ್ರಮಾಣದ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.