150 ನೇ ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ಹೆಸರಿನಲ್ಲಿ ಅಂತಾರಾಷ್ಟ್ರೀಯ ನೈರ್ಮಲ್ಯ ಸಮ್ಮೇಳನವೊಂದನ್ನು ಆಯೋಜಿಸಿ, ಅದಕ್ಕೆ 70ರಿಂದ 80 ದೇಶಗಳ ನೈರ್ಮಲ್ಯ ಸಚಿವರನ್ನು ಆಹ್ವಾನಿಸುವ ಉದ್ದೇಶವನ್ನು ಹೊಂದಿದೆ. ಜತೆಗೆ ಈ ಎಲ್ಲ ವಿದೇಶಿ ಸಚಿವರನ್ನು ಗುಜರಾತಿನಲ್ಲಿರುವ ಗಾಂಧೀಜಿ ಜತೆಗೆ ನಂಟು ಹೊಂದಿರುವ ಸ್ಥಳಗಳಿಗೆ ಕರೆದೊಯ್ಯಲು ಮುಂದಾಗಿದೆ.

ನವದೆಹಲಿ (ಜೂ. 13): ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮಸಂಸ್ಮರಣೆಗೆ ಅತ್ಯಂತ ವಿಶಿಷ್ಟರೀತಿಯಲ್ಲಿ ಚಾಲನೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ.

2019ರ ಅ.2ಕ್ಕೆ ಗಾಂಧೀಜಿ ಜನಿಸಿ 150 ವರ್ಷಗಳು ತುಂಬುತ್ತವೆ. ಈ ನಿಮಿತ್ತ ಬರುವ ಅ.2ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸರ್ಕಾರ ಉದ್ದೇಶಿಸಿದೆ. ಅದರ ಭಾಗವಾಗಿ ಗಾಂಧೀಜಿ ಹೆಸರಿನಲ್ಲಿ ಅಂತಾರಾಷ್ಟ್ರೀಯ ನೈರ್ಮಲ್ಯ ಸಮ್ಮೇಳನವೊಂದನ್ನು ಆಯೋಜಿಸಿ, ಅದಕ್ಕೆ 70ರಿಂದ 80 ದೇಶಗಳ ನೈರ್ಮಲ್ಯ ಸಚಿವರನ್ನು ಆಹ್ವಾನಿಸುವ ಉದ್ದೇಶವನ್ನು ಹೊಂದಿದೆ. ಜತೆಗೆ ಈ ಎಲ್ಲ ವಿದೇಶಿ ಸಚಿವರನ್ನು ಗುಜರಾತಿನಲ್ಲಿರುವ ಗಾಂಧೀಜಿ ಜತೆಗೆ ನಂಟು ಹೊಂದಿರುವ ಸ್ಥಳಗಳಿಗೆ ಕರೆದೊಯ್ಯಲು ಮುಂದಾಗಿದೆ.

ಸೆ.29ರಿಂದ ಅ.2ರವರೆಗೆ ‘ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ನೈರ್ಮಲ್ಯ ಸಮ್ಮೇಳನ’ವನ್ನು ದೆಹಲಿಯಲ್ಲಿ ಆಯೋಜನೆಗೊಳಿಸಲಾಗುತ್ತದೆ. ಸೆ.29ರಿಂದ ಅ.1ರವರೆಗೆ ಪ್ರವಾಸಿ ಭಾರತೀಯ ಕೇಂದ್ರ ಹಾಗೂ ಅ.2ರಂದು ತಾಜ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

2014ರ ಅ.2ರಂದು ಆರಂಭವಾದ ಸ್ವಚ್ಛ ಭಾರತ ಯೋಜನೆಯ ನಾಲ್ಕು ವರ್ಷಗಳ ಯಶೋಗಾಥೆಯನ್ನು ಈ ಸಮ್ಮೇಳನದಲ್ಲಿ ಸರ್ಕಾರ ತೆರೆದಿಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ಬಳಿಕ ವಿದೇಶಿ ಸಚಿವರನ್ನು ಮಹಾತ್ಮ ಗಾಂಧಿ ಜತೆ ನಂಟು ಹೊಂದಿದ ಗುಜರಾತಿನ ಶಾಂತಿನಿಕೇತನ, ಪೋರಬಂದರ್‌ ಹಾಗೂ ಮಹಾರಾಷ್ಟ್ರದ ಯೆರವಾಡಕ್ಕೆ ಕರೆದೊಯ್ಯಲಾಗುತ್ತದೆ. ಯರೋಪ್‌, ಅಮೆರಿಕ, ಬ್ರಿಕ್ಸ್‌ ರಾಷ್ಟ್ರಗಳ ಸಚಿವರು ಮಾತ್ರವೇ ಅಲ್ಲದೆ, ಹಿಂದುಳಿದ ದೇಶಗಳ ಮಂತ್ರಿಗಳು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.