ಬೆಂಗಳೂರು :  ರಾತ್ರಿ ಪಾಳಿ ಕರ್ತವ್ಯ ಮುಗಿಸಿ ರಸ್ತೆ ಬದಿ ಬಿಎಂಟಿಸಿ ಬಸ್‌ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ನಿದ್ರೆಗೆ ಜಾರಿದ್ದ ವೇಳೆ ಬಸ್‌ನ ಡಿಸೇಲ್‌ ಕಳವು ಮಾಡಿರುವ ಘಟನೆ ನಡೆದಿದೆ.

ಈ ಸಂಬಂಧ 80 ಲೀಟರ್‌ ಡಿಸೇಲ್‌ ಕಳವು ಮಾಡಲಾಗಿದೆ ಎಂದು ಬಿಎಂಟಿಸಿ ಬಸ್‌ ಚಾಲಕ ಗುರುಸ್ವಾಮಿ ಅವರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಗುರುಸ್ವಾಮಿ ಬಿಎಂಟಿಸಿ 8ನೇ ಡಿಪೋನ ಚಾಲಕರಾಗಿದ್ದು, ಮೇ 2 ರಂದು ರಾತ್ರಿ ಡಿಪೋನಲ್ಲಿ ಡಿಸೇಲ್‌ ಭರ್ತಿ ತುಂಬಿಸಿಕೊಂಡು ನಿರ್ವಾಹಕ ಮಂಜುನಾಥ್‌ ಜತೆ ರೂಟ್‌ ಮೇಲೆ ತೆರಳಿದ್ದರು. ರಾತ್ರಿ 11.10ರ ಸುಮಾರಿಗೆ ಬಿಇಎಂಎಲ್‌ ಕಾರ್ಖಾನೆಯಿಂದ ನೌಕರರನ್ನು ಪಿಕಪ್‌ ಮಾಡಿ, ಬೋನ್‌ ಮಿಲ್‌ ಹೆಸರುಘಟ್ಟರಸ್ತೆಯಲ್ಲಿ ಕೊನೆಯದಾಗಿ ನೌಕರರನ್ನು ಇಳಿಸಿದ್ದರು. ಬಳಿಕ ಸೋಲದೇವನಹಳ್ಳಿಯ ರಾಜ್‌ ಬಿರಿಯಾನಿ ಹೋಟೆಲ್‌ ಮುಂಭಾಗ ರಾತ್ರಿ 12.30ರ ಸುಮಾರಿಗೆ ಬಸ್‌ನ್ನು ರಸ್ತೆ ಬದಿ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ನಿದ್ರೆಗೆ ಜಾರಿದ್ದರು.

ಮರು ದಿನ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಚಿಕ್ಕಬಾಣಾವಾರದಲ್ಲಿ ಬಿಇಎಂಎಲ್‌ ನೌಕರರನ್ನು ಪಿಕಪ್‌ ಮಾಡಿಕೊಂಡು ಹೋಗುವಾಗ ಸಪ್ತಗಿರಿ ಆಸ್ಪತ್ರೆ ಬಳಿ ಬಸ್‌ ಏಕಾಏಕಿ ನಿಂತು ಬಿಟ್ಟಿದೆ. ಬಸ್‌ ರಿಪೇರಿ ಆಗಿದೆ ಎಂದು ಚಾಲಕ ಡಿಪೋಗೆ ಮಾಹಿತಿ ನೀಡಿದ್ದು, ಮೆಕ್ಯಾನಿಕ್‌ ಬಂದು ಪರಿಶೀಲನೆ ನಡೆಸಿದಾಗ ಡಿಸೇಲ್‌ ಖಾಲಿಯಾಗಿದೆ ಎಂದು ಹೇಳಿದ್ದರು. ಇದರಿಂದ ಆತಂಕಗೊಂಡ ಚಾಲಕ 80 ಲೀ. ಡೀಸೆಲ್‌ನ್ನು ಕಳವು ಆಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.