ಸಚಿನ್‌ ತೆಂಡೂಲ್ಕರ್‌ ಜೀವನಾಧಾರಿತ ಚಿತ್ರ ‘ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌' ಚಿತ್ರ ಶುಕ್ರವಾರ ತೆರೆಗೆ ಅಪ್ಪಳಿಸಿದ್ದು, ಮೊದಲ ದಿನವೇ ಭಾರೀ ಸದ್ದು ಮಾಡಿದೆ. ಚಿತ್ರದಲ್ಲಿ ತೆಂಡುಲ್ಕರ್‌ ಜೀವನದ 8 ಕುತೂಹಲಕಾರಿ ಸತ್ಯಗಳು ಅನಾವರಣ ಗೊಂಡಿದೆ. ಈ ಬಗ್ಗೆ ‘ದಿ ಕ್ವಿಂಟ್‌' ಆಂಗ್ಲ ವೆಬ್‌ಸೈಟ್‌ ವಿಶೇಷ ವರದಿ ಮಾಡಿದೆ. ಅದರ ವಿವರ ಇಂತಿದೆ.

1. ನಿವೃತ್ತಿ ತಡೆದಿದ್ದು ರಿಚರ್ಡ್ಸ್:

2007ರ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿದ ಸಚಿನ್‌ ನಿವೃತ್ತಿಗಾಗಿ ಕೂಗೆದ್ದಿತ್ತು. ಸಚಿನ್‌ ಸಹ ನಿವೃತ್ತಿ ಬಗ್ಗೆ ಯೋಚಿಸಿದ್ದರಂತೆ. ಆದರೆ, ಸರಿಯಾದ ಸಮಯ ದಲ್ಲಿ ವಿಂಡೀಸ್‌ ದಿಗ್ಗಜ, ಸರ್‌ ವಿವಿಯನ್‌ ರಿಚರ್ಡ್ಸ್ ದೂರವಾಣಿ ಮೂಲಕ ಮಾತನಾಡಿ, ಮುಂದುವರಿಯು ವಂತೆ ಸಚಿನ್‌ ಅವರನ್ನು ಕೇಳಿಕೊಂಡಿದ್ದರಂತೆ.

2. ಸಹಪಾಠಿಗೆ ಮಗನಿಂದ ಏಟು:

2007ರ ವಿಶ್ವಕಪ್‌ ಸೋಲಿನ ಬಳಿಕ ಸಚಿನ್‌ ತಮ್ಮ ಮಕ್ಕ ಳಿಗೆ, ಶಾಲೆಯಲ್ಲಿ ಯಾರಾದರೂ ವಿಶ್ವಕಪ್‌ ಸೋಲಲು ನಿಮ್ಮ ತಂದೆಯೇ ಕಾರಣ ಎಂದು ಟೀಕಿಸಿದರೆ ಮರುಉತ್ತ ರಿಸದೆ ಸುಮ್ಮನಿರುವಂತೆ ಹೇಳಿದ್ದರಂತೆ. ಆದರೆ ಸಹಪಾಠಿ ಯೊಬ್ಬ ಟೀಕಿಸಿದಾಗ ಸಿಟ್ಟು ತಡೆಯಲಾರದೆ ಅರ್ಜುನ್‌ ಆತನನ್ನು ಹೊಡೆದಿದ್ದರಂತೆ.

3. ಸಚಿನ್'ಗೆ ಅತ್ತೆಯೇ ಬೌಲರ್:

ವಾಣಿಜ್ಯ ನಗರಿ ಮುಂಬೈನ ಶಿವಾಜಿ ಪಾರ್ಕ್ನಲ್ಲಿರುವ ತಮ್ಮ ಮನೆ ಬಳಿ ಕ್ರಿಕೆಟ್‌ ಅಭ್ಯಾಸ ನಡೆಸುವಾಗ ಸಚಿನ್‌ ಅವರು ಸದಾ ತಮ್ಮ ಅತ್ತೆಗೆ ಚೆಂಡನ್ನು ಎಸೆಯುವಂತೆ ಕೇಳಿಕೊಳ್ಳುತ್ತಿದ್ದರಂತೆ. ಅವರು ಎಸೆಯುತ್ತಿದ್ದ ಲೆಂಗ್ತ್, ತೆಂಡೂಲ್ಕರ್‌ ಅವರಿಗೆ ಬ್ಯಾಕ್‌ಫುಟ್‌ ಡ್ರೈವ್‌ ಅಭ್ಯಾಸ ಮಾಡಲು ಸೂಕ್ತವಾಗಿತ್ತಂತೆ.

4. ಶುಭಾಶಯ ಇಷ್ಟವಿರಲಿಲ್ಲ:

ಯಾವುದೇ ಸ್ತರದ ಪಂದ್ಯವೇ ಇರಲಿ, ಅದರ ಕಣಕ್ಕೆ ಇಳಿಯುವುದಕ್ಕೂ ಮುನ್ನ ಯಾರಾದರೂ ಶುಭಾಶಯಗಳನ್ನು ತಿಳಿಸಿದರೆ ಸಚಿನ್‌ಗೆ ಇಷ್ಟವೇ ಆಗುತ್ತಿರಲಿಲ್ಲವಂತೆ. ಸ್ವತಃ ಅವರ ಕೋಚ್‌ ರಮಾಕಾಂತ್‌ ಅಚ್ರೇಕರ್‌ ಅವರು ಶುಭಾಶಯ ಹೇಳಿದ್ದರೂ ಸಚಿನ್‌ ಸ್ವೀಕರಿಸುತ್ತಿರಲಿಲ್ಲವಂತೆ.

5. ಪತ್ನಿಯ ಪ್ರೇಮಕಥೆ:

ಅತ್ತ ಕ್ರಿಕೆಟ್‌ನಲ್ಲಿ ದೈತ್ಯ ಪ್ರತಿಭೆಯಾಗಿ ಬೆಳೆಯುತ್ತಿದ್ದ ಸಚಿನ್‌ ತೆಂಡುಲ್ಕರ್‌ಗೆ ಅಂಜಲಿ ಜೊತೆ ಪ್ರೇಮಾಂಕುರ ವಾಗಿತ್ತು. ಆಗಿನ್ನೂ ಅಂಜಲಿ ವೈದ್ಯಕೀಯ ವ್ಯಾಸಂಗ ಮುಗಿಸಿರಲಿಲ್ಲವಂತೆ. ದಿನಪತ್ರಿಕೆಗಳಲ್ಲಿ ಬರುವ ಸಚಿನ್‌ ಅವರ ಭಾವಚಿತ್ರಗಳನ್ನು ಕತ್ತರಿಸಿ ಅಂಜಲಿ ತಮ್ಮ ಪುಸ್ತಕಗಳಲ್ಲಿ ಅಂಟಿಸುತ್ತಿದ್ದರಂತೆ.

6. ಪಾಕ್ ಎದುರಿಸಲು ನಿರಶನ!:

2011ರ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧ ಸೆಮಿಫೈನಲ್‌ ಪಂದ್ಯವನ್ನು ಭಾರತ ತಂಡ ಖಾಲಿ ಹೊಟ್ಟೆಯಲ್ಲಿಯೇ ಆಡಿತ್ತಂತೆ. ಹೋಟೆಲ್‌ನಲ್ಲಿ ಊಟ ಮಾಡದ ತಂಡಕ್ಕೆ ಕ್ರೀಡಾಂಗಣದಲ್ಲೂ ಆಟಗಾರರಿಗೆ ಆಹಾರ ವ್ಯವಸ್ಥೆ ಆಗದಿದ್ದಾಗ, ಸಚಿನ್‌ ಊಟ ಬಗ್ಗೆ ಯೋಚನೆ ಬಿಡಿ, ಆಟದ ಕಡೆ ಗಮನ ಕೊಡಿ ಎಂದಿದ್ದರಂತೆ.

7. ಟೆನಿಸ್ ಎಲ್ಬೋದಲ್ಲೂ ಆಟ:

2004ರಲ್ಲಿ ಟೆನಿಸ್‌ ಎಲ್ಬೋ ಸಮಸ್ಯೆಯಿಂದ ಬಳಲುತ್ತಿದ್ದ ಸಚಿನ್‌ ಅವರು, ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡ ಕೂಡಲೇ ಅಭ್ಯಾಸ ಆರಂಭಿಸಿದರಂತೆ. ಮೊಣಕೈ ನೋವು ಕಾಡುತ್ತಿದ್ದರೂ ಪ್ರತಿ ದಿನ ನೆಟ್ಸ್‌ನಲ್ಲಿ 140 ಎಸೆತಗಳನ್ನು ಎದುರಿಸುತ್ತಿದ್ದ ಅವರು, 10 ಮಹಡಿಗಳನ್ನು ಹತ್ತಿ ಇಳಿಯುತ್ತಿದ್ದರಂತೆ.

8. ಜೀವನಪರ್ಯಂತ ಗಾಯ:

2001ರಲ್ಲಿ ಸಚಿನ್‌ ಕಾಲ್ಬೆರಳು ಮುರಿದುಕೊಂಡಿದ್ದರಂತೆ. ವೈದ್ಯರು ಇದು ಜೀವನದಲ್ಲಿ ವಾಸಿಯಾಗದ ಗಾಯ ಎಂದಿದ್ದರಂತೆ. ಬೆರಳಿನ ಮೇಲೆ ಹೆಚ್ಚಿನ ಭಾರ ಹಾಕದಂತೆ ಅವರಿಗೆ ಸೂಚಿಸಲಾಗಿತ್ತು. ಮುಂದಿನ 12 ವರ್ಷ ಸಚಿನ್‌, ಪ್ರತಿ ಬಾರಿ ಮೈದಾನಕ್ಕಿಳಿಯುವಾಗಲೂ ಬೆರಳು ಸುರಕ್ಷಿತವಾಗಿರಲು ಹೆಚ್ಚಿನ ಕಾಳಜಿ ವಹಿಸಿದ್ದರಂತೆ.