ಇಂದು ಸಚಿವರಾಗಲಿರುವ ಜೆಡಿಎಸ್ ಸಂಭಾವ್ಯ ನಾಯಕರಿವರು

First Published 6, Jun 2018, 7:26 AM IST
8 JDS Karnataka Ministers to Take Oath Today
Highlights

ಜೆಡಿಎಸ್‌ ಪಾಲಿಗೆ 12 ಖಾತೆಗಳಿದ್ದರೂ ಬುಧವಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಎಲ್ಲಾ ಸಚಿವರು ಪ್ರಮಾಣವಚನ ಸ್ವೀಕರಿಸುವುದಿಲ್ಲ. ಮೊದಲ ಹಂತದಲ್ಲಿ 8 ರಿಂದ 9 ಜೆಡಿಎಸ್‌ ಶಾಸಕರು ಸಚಿವರಾಗಲಿದ್ದಾರೆ 

ಬೆಂಗಳೂರು :  ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಪಕ್ಷದಿಂದ ಯಾರಾರ‍ಯರು ಸಚಿವರಾಗಬಹುದು ಎಂಬುದರ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಡರಾತ್ರಿವರೆಗೆ ಸಭೆ ನಡೆಸಿ ಕೆಲವು ಹೆಸರುಗಳನ್ನು ಅಂತಿಮಗೊಳಿಸಿದರು. ಇದೇ ವೇಳೆ ಬುಧವಾರ ಬೆಳಗ್ಗೆ ಕೆಲವು ಬದಲಾವಣೆಗಳು ಆಗುವ ಸಂಭವವಿದೆ ಎಂದೂ ತಿಳಿದು ಬಂದಿದೆ.

ಈ ಮಧ್ಯೆ, ಜೆಡಿಎಸ್‌ ಪಾಲಿಗೆ 12 ಖಾತೆಗಳಿದ್ದರೂ ಬುಧವಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಎಲ್ಲಾ ಸಚಿವರು ಪ್ರಮಾಣವಚನ ಸ್ವೀಕರಿಸುವುದಿಲ್ಲ. ಮೊದಲ ಹಂತದಲ್ಲಿ 8 ರಿಂದ 9 ಜೆಡಿಎಸ್‌ ಶಾಸಕರು ಸಚಿವರಾಗಲಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರುವುದಿಲ್ಲ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

5ಕ್ಕಿಂತ ಹೆಚ್ಚು ಒಕ್ಕಲಿಗರು ಬೇಡ: ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸಂಪುಟದಲ್ಲಿ ಐದಕ್ಕಿಂತ ಹೆಚ್ಚು ಒಕ್ಕಲಿಗರು ಬೇಡ ಎಂಬ ನಿರ್ಧಾರ ಕೈಗೊಳ್ಳಲಾಗಿದ್ದು, ಅದನ್ನು ಪಾಲಿಸುವಂತೆ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಜಾತಿವಾರು ಮತ್ತು ಪ್ರಾದೇಶಿಕವಾರು ಆದ್ಯತೆ ನೀಡಲಾಗಿದೆ. ಮೈಸೂರು ಜಿಲ್ಲೆಯಿಂದ ಜಿ.ಟಿ.ದೇವೇಗೌಡ, ಮಂಡ್ಯ ಜಿಲ್ಲೆಯಿಂದ ಸಿ.ಎಸ್‌.ಪುಟ್ಟರಾಜು, ಹಾಸನ ಜಿಲ್ಲೆಯಿಂದ ಎಚ್‌.ಡಿ.ರೇವಣ್ಣ, ಉತ್ತರ ಕರ್ನಾಟಕದಿಂದ ಬಂಡೆಪ್ಪ ಕಾಶೆಂಪೂರ, ಹೈದರಬಾದ್‌-ಕರ್ನಾಟಕ ಭಾಗದಿಂದ ವೆಂಕಟರಾವ್‌ ನಾಡಗೌಡ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.

ಇನ್ನು ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದ್ದು, ಮಹೇಶ್‌ ಅವರು ಬುಧವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮೈತ್ರಿಯ ವೇಳೆ ಬಿಎಸ್‌ಪಿ ಅಧಿನಾಯಕಿಗೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಬಿಎಸ್‌ಪಿ ಪಕ್ಷದಿಂದ ಮಹೇಶ್‌ಗೆ ಸಚಿವ ಸ್ಥಾನ ನೀಡುವ ಬಗ್ಗೆ ಆಶ್ವಾಸನೆ ನೀಡಲಾಗಿತ್ತು. ಅದರಂತೆಯೇ ಮಹೇಶ್‌ ಅವರಿಗೆ ಸಚಿವ ಸ್ಥಾನ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ದಲಿತ ಸಮುದಾಯದಿಂದ ಎಚ್‌.ಕೆ.ಕುಮಾರಸ್ವಾಮಿ ಮತ್ತು ಅನ್ನದಾನಿ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚಿಸಲಾಗಿದೆ. ತುಮಕೂರು ಜಿಲ್ಲೆಯಿಂದ ಸತ್ಯನಾರಾಯಣ ಅಥವಾ ಗುಬ್ಬಿ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಎಚ್‌. ವಿಶ್ವನಾಥ್‌ ಅವರಿಗೆ ಮುಂದಿನ ದಿನದಲ್ಲಿ ಉತ್ತಮ ಸ್ಥಾನ ಕಲ್ಪಿಸುವ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ಜೆಡಿಎಸ್‌ ಸಂಭಾವ್ಯರು

ಒಕ್ಕಲಿಗ

ಎಚ್‌.ಡಿ.ರೇವಣ್ಣ

ಜಿ.ಟಿ.ದೇವೇಗೌಡ

ಸಿ.ಎಸ್‌.ಪುಟ್ಟರಾಜು

ಸತ್ಯನಾರಾಯಣ/ಗುಬ್ಬಿ ಶ್ರೀನಿವಾಸ್‌

ವೀರಶೈವ ಲಿಂಗಾಯತ

ಎಂ.ಸಿ.ಮನಗೂಳಿ

ವೆಂಕಟರಾವ್‌ ನಾಡಗೌಡ

ಕುರುಬ

ಬಂಡೆಪ್ಪ ಕಾಶೆಂಪೂರ್‌

ಪರಿಶಿಷ್ಟಜಾತಿ

ಎನ್‌.ಮಹೇಶ್‌

ಎಚ್‌.ಕೆ.ಕುಮಾರಸ್ವಾಮಿ/ಡಾ.ಅನ್ನದಾನಿ

loader