ಪ್ರಗತಿಪರ ಚಿಂತಕ ಕೆ.ಎಸ್‌.ಭಗವಾನ್‌ ಕೊಲೆ ಸಂಚಿನಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಮೂಲದ ಅಮೋಲ್‌ ಕಾಳೆ ಮನೆಯಲ್ಲಿ ಲಭ್ಯವಾದ ‘ಡೈರಿ’ ಈ ಮಹತ್ವದ ಮಾಹಿತಿಯನ್ನು ಹೊಂದಿದೆ. ಈ ಪಟ್ಟಿಯಲ್ಲಿ ಗೌರಿ ಲಂಕೇಶ್‌, ಜ್ಞಾನಪೀಠ ಪುರಸ್ಕೃತ ಪ್ರತಿಷ್ಠಿತ ಸಾಹಿತಿ ಹಾಗೂ ಪ್ರಗತಿಪರ ಧೋರಣೆಯುಳ್ಳ ಸ್ವಾಮೀಜಿಯೊಬ್ಬರ ಹೆಸರುಗಳಿವೆ. ಈ ಹೆಸರುಗಳನ್ನು ಕನ್ನಡದಲ್ಲೇ ಬರೆಯಲಾಗಿದ್ದು, ಬಹುಶಃ ಕಾಳೆಗೆ ಆತನ ಸಹಚರ ವಿಜಯಪುರ ಮನೋಹರ್‌ ಬರೆದುಕೊಟ್ಟಿರಬಹುದು ಎಂದು ಎಸ್‌ಐಟಿ ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿವೆ.

ಗಿರೀಶ್‌ ಮಾದೇನಹಳ್ಳಿ, ಕನ್ನಡಪ್ರಭ
ಬೆಂಗಳೂರು[ಜೂ.01]: ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಮಾತ್ರವಲ್ಲದೆ ನಾಡಿನ ಸಾರಸ್ವತ ಲೋಕದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳೂ ಸೇರಿದಂತೆ ಎಂಟು ಮಹನೀಯರು ಹಂತಕರ ಹಿಟ್‌ ಲಿಸ್ಟ್‌ನಲ್ಲಿದ್ದರು ಎಂಬ ಸ್ಫೋಟಕ ಮಾಹಿತಿ ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಗತಿಪರ ಚಿಂತಕ ಕೆ.ಎಸ್‌.ಭಗವಾನ್‌ ಕೊಲೆ ಸಂಚಿನಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಮೂಲದ ಅಮೋಲ್‌ ಕಾಳೆ ಮನೆಯಲ್ಲಿ ಲಭ್ಯವಾದ ‘ಡೈರಿ’ ಈ ಮಹತ್ವದ ಮಾಹಿತಿಯನ್ನು ಹೊಂದಿದೆ. ಈ ಪಟ್ಟಿಯಲ್ಲಿ ಗೌರಿ ಲಂಕೇಶ್‌, ಜ್ಞಾನಪೀಠ ಪುರಸ್ಕೃತ ಪ್ರತಿಷ್ಠಿತ ಸಾಹಿತಿ ಹಾಗೂ ಪ್ರಗತಿಪರ ಧೋರಣೆಯುಳ್ಳ ಸ್ವಾಮೀಜಿಯೊಬ್ಬರ ಹೆಸರುಗಳಿವೆ. ಈ ಹೆಸರುಗಳನ್ನು ಕನ್ನಡದಲ್ಲೇ ಬರೆಯಲಾಗಿದ್ದು, ಬಹುಶಃ ಕಾಳೆಗೆ ಆತನ ಸಹಚರ ವಿಜಯಪುರ ಮನೋಹರ್‌ ಬರೆದುಕೊಟ್ಟಿರಬಹುದು ಎಂದು ಎಸ್‌ಐಟಿ ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿವೆ.
ಈ ನಿಗೂಢ ಡೈರಿಯಲ್ಲಿರುವ ಕೈಬರಹದ ಪತ್ತೆಗೆ ವಿಧಿವಿಜ್ಞಾನ ತಜ್ಞರ ನೆರವು ಕೋರಲಾಗಿದೆ. ಅಲ್ಲದೆ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ನಂತರ ಮಹಾರಾಷ್ಟ್ರದ ಅಮೋಲ್‌ ಕಾಳೆ ಅಂಡ್‌ ಟೀಂ, ಕರ್ನಾಟಕದಲ್ಲಿರುವ ಕಡು ಎಡಪಂಥೀಯ ಧೋರಣೆ ಪ್ರತಿಪಾದಿಸುವವರ ಬಗ್ಗೆ ಮಾಹಿತಿ ಕಲೆ ಹಾಕಿ ಅದರಲ್ಲಿ ಪ್ರಮುಖ ಹೆಸರುಗಳನ್ನು ಪಟ್ಟಿಮಾಡಿದೆ. ಆ ಪಟ್ಟಿಯಲ್ಲಿರುವ ಅಷ್ಟೂ ಮಂದಿ ಆರೋಪಿಗಳ ಸೈದ್ಧಾಂತಿಕ ವಿರೋಧಿಗಳಾಗಿದ್ದಾರೆ ಎನ್ನುತ್ತವೆ ಮೂಲಗಳು.
ಗೌರಿ ಲಂಕೇಶ್‌ ಹತ್ಯೆ ತನಿಖೆ ವೇಳೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಅವರ ಕೊಲೆ ಸಂಚು ಬಯಲಾಯಿತು. ಈಗ ಹಿಟ್‌ ಲಿಸ್ಟ್‌ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿ, ಎರಡನೇ ಚಾರ್ಜ್’ಶೀಟ್’ನಲ್ಲಿ ಸಂಭವನೀಯ ಕೊಲೆ ಸಂಚಿನಲ್ಲಿದ್ದವರ ವಿವರ ಉಲ್ಲೇಖಿಸುತ್ತೇವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಹಿಟ್‌ಲಿಸ್ಟ್‌ನಲ್ಲಿ ಯಾರ್’ಯಾರು..?
ಭಗವಾನ್‌ ಕೊಲೆ ಸಂಚಿನಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಮೂಲದ ಅಮೋಲ್‌ ಕಾಳೆ ಮನೆಯಲ್ಲಿ ಲಭ್ಯವಾದ ಡೈರಿಯಲ್ಲಿ ಧಾರವಾಡ ಮೂಲದ ಜ್ಞಾನಪೀಠ ಪುರಸ್ಕೃತ ಸಾಹಿತಿ, ಬೆಂಗಳೂರಿನ ಪ್ರಗತಿಪರ ಸ್ವಾಮೀಜಿ, ಪುಸ್ತಕ ಪ್ರಾಧಿಕಾರದ ಓರ್ವ ಮಾಜಿ ಅಧ್ಯಕ್ಷರ ಹೆಸರುಗಳು ನಮೂದಾಗಿವೆ. ಈ ಪಟ್ಟಿಯಲ್ಲಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯಾಗಿದೆ. ಇನ್ನುಳಿದ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಕೊಲೆ ಸಂಚು ಬಯಲಾಗಿದೆ. ಇನ್ನುಳಿದ ಮೂವರ ಹೆಸರು ತಿಳಿದುಬಂದಿಲ್ಲ.
ಬೆಂಗಳೂರು ನಕ್ಷೆ ಪತ್ತೆ:
ಈ ನಾಲ್ವರು ಆರೋಪಿಗಳ ಪೈಕಿ ಪ್ರವೀಣ್‌, ಅಮೋಲ್‌ ಕಾಳೆ ಹಾಗೂ ಅಮಿತ್‌ ಮನೆಯಲ್ಲಿ ಡೈರಿಗಳು ಪತ್ತೆಯಾಗಿವೆ. ಇದರಲ್ಲಿ ರಹಸ್ಯ ಕೋಡ್‌ನಲ್ಲಿ ಕೊಲೆ ಸಂಚಿಗೆ ಸಂಬಂಧಿಸಿದ ಮಾಹಿತಿ ಬರೆದಿಟ್ಟುಕೊಂಡಿದ್ದಾರೆ. ಅಲ್ಲದೆ, ಆರೋಪಿಗಳ ಮನೆಯಲ್ಲಿ ಸೈದ್ಧಾಂತಿಕ ಪ್ರತಿಪಾದನೆಯ ಗ್ರಂಥಗಳು ಹಾಗೂ ಬೆಂಗಳೂರು ನಕ್ಷೆಗಳು ಸಹ ಸಿಕ್ಕಿವೆ ಎಂದು ತಿಳಿದು ಬಂದಿದೆ.