Asianet Suvarna News Asianet Suvarna News

ಅಂಬಿ ವೈಕುಂಠ ಸಮಾರಾಧನೆ : ಆಗಮಿಸಿದ್ದ ಅಭಿಮಾನಿಗಳೆಷ್ಟು..?

ಬುಧವಾರ ಹಿರಿಯ ನಟ ದಿವಂಗತ ಅಂಬರೀಶ್ ಅವರ ವೈಕುಂಠ ಸಮಾರಾಧನೆ ನಡೆದಿದ್ದು ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ  ಅಭಿಮಾನಿಗಳು ಆಗಮಿಸಿದ್ದರು. 

7 thousand Fans Attend Ambareesh Vaikunta Samaradhane
Author
Bengaluru, First Published Dec 6, 2018, 9:12 AM IST

ಬೆಂಗಳೂರು :  ನಗರದ ಅರಮನೆ ಆವರಣದಲ್ಲಿರುವ ವೈಟ್‌ ಪೆಟಲ್ಸ್‌ ಸಂಭಾಗಣದಲ್ಲಿ ಬುಧವಾರ ಹಿರಿಯ ನಟ ದಿವಂಗತ ಅಂಬರೀಷ್‌ ವೈಕುಂಠ ಸಮಾರಾಧನೆ ಕಾರ್ಯಕ್ರಮ ನಡೆಯಿತು. ಅವರ ಕುಟುಂಬದ ಸಂಪ್ರದಾಯದಂತೆ ವೈಕುಂಠ ಸಮಾರಾಧನೆಯ ವಿಧಿ ವಿಧಾನಗಳು ನಡೆದವು.

ಅಂಬರೀಷ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮಂಗಳವಾರವಷ್ಟೇ ಅವರ ಕುಟುಂಬದವರು, 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮ ನೇರವೇರಿಸಿದ್ದರು. ಬುಧವಾರ ಮತ್ತೆ ಅರಮನೆ ಆವರಣದಲ್ಲಿ ವೈಕುಂಠ ಸಮಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಲವು ಬಗೆಯ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಮಂಡ್ಯದಿಂದ ತಂದಿದ್ದ ಕಬ್ಬಿನ ಜಲ್ಲೆ, ಭತ್ತ ಮತ್ತು ರಾಗಿ ತೆನೆ ಸಮೇತ ಹಲವು ಬಗೆಯ ಆಹಾರ ಪದಾರ್ಥಗಳನ್ನು ಸಮರ್ಪಿಸುವುದರ ಮೂಲಕ ಪುಣ್ಯತಿಥಿ ನೇರವೇರಿಸಲಾಯಿತು. ಚಿತ್ರರಂಗ, ರಾಜಕೀಯ ಕ್ಷೇತ್ರದ ಗಣ್ಯರು ಸೇರಿದಂತೆ ಸುಮಾರು ಏಳು ಸಾವಿರ ಮಂದಿ ಭಾಗವಹಿಸಿದ್ದರು.

ಪುರೋಹಿತರಾದ ಭಾನು ಪ್ರಕಾಶ್‌ ಮತ್ತು ನಾಗೇಶ್‌ ದೀಕ್ಷಿತ್‌ ನೇತೃತ್ವದಲ್ಲಿ ಸುಮಲತಾ ಮತ್ತು ಪುತ್ರ ಅಭಿಷೇಕ್‌ ಅವರು ಅಂಬರೀಷ್‌ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು. ಅಂಬರೀಷ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮಂತ್ರೋಪದೇಶ ಮಾಡಲಾಯಿತು. ಅಂಬಿ ಅಭಿಮಾನಿಗಳಿಗೆ ಸುಮಲತಾ ಮತ್ತು ಪುತ್ರ ಅಭಿಷೇಕ್‌ ಊಟ ಬಡಿಸಿದರು. ಅಂಬರೀಷ್‌ ವೈಕುಂಠ ಸಮಾರಾಧನೆಗೆ ಕುಟುಂಬಸ್ಥರು ಸೇರಿ ಚಿತ್ರರಂಗ ಹಾಗೂ ರಾಜಕೀಯ ವಲಯದ ಗಣ್ಯಾತಿಗಣ್ಯರು ಆಗಮಿಸಿದ್ದರು. ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ, ಸಂದೇಶ್‌ ನಾಗರಾಜ್‌ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಶಾಮನೂರು ಶಿವಶಂಕರಪ್ಪ, ಜಮೀರ್‌ ಅಹಮದ್‌, ಈಶ್ವರ್‌ ಖಂಡ್ರೆ, ಅಶೋಕ್‌ ಖೇಣಿ, ಪುನೀತ್‌ ರಾಜ್‌ಕುಮಾರ್‌ ದಂಪತಿ, ಕ್ರಿಕೆಟ್‌ ಆಟಗಾರ ಅನಿಲ್‌ ಕುಂಬ್ಳೆ ದಂಪತಿ, ನಟಿ ಮಂಜು ಭಾರ್ಗವಿ, ಗಾಯಕ ವಿಜಯ್‌ ಪ್ರಕಾಶ್‌, ರಾಜೇಂದ್ರ ಸಿಂಗ್‌ ಬಾಬು, ತಮಿಳು ನಟ ಕಾರ್ತಿಕ್‌, ಕೋಕಿಲಾ ಮೋಹನ್‌, ಹಿರಿಯ ನಟಿಯರಾದ ಜಯಸುಧಾ, ತಾರಾ, ಉಪೇಂದ್ರ ದಂಪತಿ, ತೆಲುಗು ನಟ ಮೋಹನ್‌ ಬಾಬು ಪುತ್ರ ವಿಷ್ಣು ವಂಚು ಮತ್ತಿತರರು ಆಗಮಿಸಿ, ಅಂಬರೀಷ್‌ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು. 

ರಾಜ್ಯದವಿವಿಧೆಡೆಗಳಿಂದ ಅಂಬಿ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಬಂದಿದ್ದರು. 7 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುದ್ದೆ, ಕಾಳು ಸಾರು, ಮೊಸರನ್ನ, ಪಾಯಸ, ಪುರಿ, ವಡೆ, ಟೊಮೊಟೊ ರಸಂ, ಕೂರ್ಮಾ ಸೇರಿದಂತೆ ಒಟ್ಟು 22 ಬಗೆಯ ಪದಾರ್ಥಗಳ ಊಟದ ವ್ಯವಸ್ಥೆಯಿತ್ತು. ಚಿತ್ರರಂಗದ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಇತ್ತು.

Follow Us:
Download App:
  • android
  • ios