ಬೆಂಗಳೂರು (ಸೆ .15): ಕಾವೇರಿ ನೀರು ಹಂಚಿಕೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಮೊನ್ನೆ ಸಂಜೆ ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ್ದ ಸುಮಾರು 35 ಕ್ಕೂ ಹೆಚ್ಚು ಬಸ್ ಗಳಿಗೆ ಬೆಂಕಿ ಇಟ್ಟಿದ್ದ 7 ಮಂದಿಯನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಕ್ಷಿತ್ (18), ಸತೀಷ್ (27) ಕೆಂಪೇಗೌಡ (28), ಪ್ರಕಾಶ್ (46), ಲೋಕೇಶ್ (25), ಚಂದನ್ ಬಂಧಿತರಾಗಿದ್ದು, ಇವರೆಲ್ಲರೂ ಡಿಸೋಜಾ ನಗರ ವೀರ ಭದ್ರನಗರ ನಿವಾಸಿಗಳಾಗಿದ್ದು ಪೀಣ್ಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಅಂದು ನಡೆದ ಗಲಭೆ ವಿಡಿಯೋ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಸಿದ ರಾಜರಾಜೇಶ್ವರಿನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರ ವಿರುದ್ಧ ಕಾನೂನು ಬಾಹಿರವಾಗಿ ಗುಂಪುಗೂಡುವುದು (ಐಪಿಸಿ 143), ದೊಂಬಿ (147), ಮಾರಕಾಸ್ತ್ರ ಹಿಡಿದು ದೊಂಬಿ (148), ಮಾರಕಾಸ್ತ್ರಗಳಿಂದ ಹಲ್ಲೆ (324), ಸಾರ್ವಜನಿಕ ಆಸ್ತಿಗೆ ಹಾನಿ (427) ಹಾಗೂ ಬೆಂಕಿ ಹಚ್ಚಿ ಹಾನಿ ಮಾಡಿದ (435) ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.