ನವದೆಹಲಿ[ಮೇ.25]: ಲೋಕಸಭಾ ಚುನಾವಣೆಯ ಫಲಿತಾಂಶ ಸೋಲು-ಗೆಲುವಿನ ಅನೇಕ ದಾಖಲೆಗಳನ್ನು ಸೃಷ್ಟಿಸಿದೆ. ಮೋದಿ ಅಲೆಗೆ, ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ನ 7 ಮಾಜಿ ಸಿಎಂಗಳು ಸೋಲಿನ ರುಚಿ ನೋಡುವಂತಾಗಿದೆ.

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಭೋಪಾಲ್‌ನಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌, ಮಹಾರಾಷ್ಟ್ರದ ಮಾಜಿ ಸಿಎಂಗಳಾದ ಅಶೋಕ್‌ ಚೌಹಾಣ್‌ ಮತ್ತು ಸುಶೀಲ್‌ಕುಮಾರ್‌ ಶಿಂಧೆ, ದೆಹಲಿಯಲ್ಲಿ ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷೀತ್‌, ಹರಿಯಾಣ ಮಾಜಿ ಸಿಎಂ ಭೂಪಿಂದರ್‌ ಹೂಡಾ, ಉತ್ತರಾಖಂಡ ಮಾಜಿ ಸಿಎಂ ಹರೀಶ್‌ ರಾವತ್‌ ಸೋಲುಂಡ ಮಾಜಿ ಸಿಎಂಗಳು.

ಒಂದು ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಘಟಾನುಘಟಿ ನಾಯಕರೇ ಮತದಾರರನ್ನು ಓಲೈಸಲು ವಿಫಲರಾಗಿದ್ದಾರೆ ಎಂಬುವುದು ಸ್ಪಷ್ಟವಾಗಿದೆ.